ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಆಗಸ್ಟ್ 14ರ ಸಂಜೆ ಸಿಂದಗಿ ಕೆರೆಗೆ ಕೃಷ್ಣಾ ಆರತಿ ಹಾಗೂ ಬಾಗಿನ ಅರ್ಪಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸಾರಂಗ ಮಠದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಭುಸಾರಂಗದೇವ ಶಿವಾಚಾರ್ಯರ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ಸಾವಿರದಿಂದ ಎರಡು ಸಾವಿರ ಮಹಿಳೆಯರು ಕೆರೆಗೆ ಆರತಿಯನ್ನು ಮಾಡಲಿದ್ದಾರೆ. ಇದರ ಜೊತೆಗೆ ಕೆರೆಗೆ 3 ಕೋಟಿ 4 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿಯ ಭೂಮಿ ಪೂಜೆ ನಡೆಯಲಿದೆ ಎಂದರು.
ಕೆರೆಯ ಹತ್ತಿರದ ಉದ್ಯಾನವನ, ಕೆರೆಯ ಸುತ್ತಲಿನ 196 ವಿದ್ಯುತ್ ಕಂಬ್ ಗಳ ಲೋಕಾರ್ಪಣೆ ಕಾರ್ಯಕ್ರಮ ಸಹ ನಡೆಯಲಿದೆ. ಹೀಗಾಗಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಸಾರಂಗ ಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಸಿಂದಗಿ ಕೆರೆಗೆ ಕೃಷ್ಣೆಯಿಂದ ನೀರು ಬರುತ್ತಿರುವುದರಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಕೆರೆಯ ಸುತ್ತ ದೀಪಾಲಂಕಾರ, ಉದ್ಯಾನವನ ನಿರ್ಮಿಸುವ ಮೂಲಕ ಹೊಸ ಕಾಯಕಲ್ಪ ಕೊಡಲಾಗಿದೆ. ಹೀಗಾಗಿ ಸಿಂದಗಿ ನಗರದ ಜನತೆ ಕರೆಯನ್ನು ವೀಕ್ಷಣೆ ಮಾಡಬಹುದು. ವಾಯುವಿಹಾರಕ್ಕೆ ಬರಲು ಸೂಕ್ತವಾಗಿದೆ. ಆಗಸ್ಟ್ 14ರಂದು ನಡೆಯುವ ಕೃಷ್ಣಾ ಆರತಿ ಕಾರ್ಯಕ್ರಮಕ್ಕೆ ಎಲ್ಲರು ಬರಬೇಕು ಎಂದರು. ಈ ವೇಳೆ ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಮಹಾನಂದ ಬಮ್ಮಣ್ಣಿ, ಹಣಮಂತ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.



