ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಬಸವಣ್ಣನವರ ಕುರಿತು ಅವಹೇಳನಕಾರಿಯಾದ ಮಾತುಗಳು ಹಾಗೂ ಬಸವ ಮಂಟಪ ಅನ್ನೋ ಪುಸ್ತಕ ಬರೆದಿರುವ ಲೇಖಕ ರವಿ ಹಂಜ್ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಬಸವೇಶ್ವರ ವೃತ್ತದಿಂದ ತಾಲೂಕು ಆಡಳಿತ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದಕ್ಕೂ ಮೊದಲು ಬಸವೇಶ್ವರ ವೃತ್ತದ ಬಳಿ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರ ಫೋಟೋಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.
ಮೆರವಣಿಗೆಯಲ್ಲಿ ಆಲಮೇಲದ ಮಲ್ಲಿ ಬೊಮ್ಮಯ್ಯ ವಿರಕ್ತ ಮಠದ ಮಲ್ಲಿ ಬೊಮ್ಮಯ್ಯ ಶ್ರೀಗಳು, ಹಿಕ್ಕನುಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶ್ರೀಗಳು ಹಾಗೂ ಸಿಂದಗಿಯ ಗುರುದೇವ ಆಶ್ರಮದ ಶಾಂತಗಂಗಾಧರ ಶ್ರೀಗಳು ಭಾಗವಹಿಸಿದ್ದರು. ತಾಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರವಿ ಹಂಜ್ ನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಯಿತು.
ಜಗದೀಶ ಕಲಬುರ್ಗಿ ಮಾತನಾಡಿ, ವಿಶ್ವಗುರು ಬಸವಣ್ಣನವರಿಗೆ ಆದಂತ ಅವಮಾನ ಇದು ಮಾನವೀಯ ಮೌಲ್ಯವುಳ್ಳ ಎಲ್ಲ ಜನರಿಗಾದ ಅವಮಾನವಾಗಿದೆ. ರವಿ ಹಂಜ್ ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದರು. ಮಲ್ಲಿ ಬೊಮ್ಮಯ್ಯ ಶ್ರೀಗಳು, ಶಾಂತಗಂಗಾಧರ ಶ್ರೀಗಳು, ಬಸವ ಸಮಿತಿಯ ಶಿವಾನಂದ ಕಲಬುರ್ಗಿ, ನಾನಾಗೋಡ ಪಾಟೀಲ, ದಲಿತ ಸೇನೆಯ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಮಹೇಶ ಜಾಬಾನೂರ ಮಾತನಾಡಿದರು.
ಮಲಕಣ್ಣ ತಳವಾರ, ಸಂಗಣ್ಣ ಬ್ಯಾಕೋಡ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅರ್ಜುಣಗಿ, ಶೈಲಜಾ ಸ್ಥಾವರ ಮಠ, ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಂಗರಗಿ, ದಾನಪ್ಪ ಜೋಗೂರ, ರಾಘವೇಂದ್ರ ಹೂಗಾರ, ರೈತ ಸಂಘದ ಅಧ್ಯಕ್ಷರು ಹಾಗೂ ರೈತ ಸಂಘದ ಅನೇಕ ಕಾರ್ಯಕರ್ತರು ಹಾಗೂ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.


