ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ವೃದ್ಧೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಕೆ ಹಾಕಿ ಬರೋಬ್ಬರಿ 24 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಿಕೆಗೆ ಬಂದಿದೆ. ಈ ಸಂಬಂಧ ಐವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ಲಕ್ಷ್ಮಿ ಅನ್ನೋ ವೃದ್ಧೆಗೆ ಅಕ್ರಮ ಹಣ ವರ್ಗಾವಣೆ ಹೆಸರಿನಲ್ಲಿ ಬೆದರಿಕೆ ಹಾಕಿ ಕಳೆದ ಜನವರಿ ತಿಂಗಳಿನಿಂದ ಹಂತ ಹಂತವಾಗಿ 24 ಕೋಟಿ ರೂಪಾಯಿ ವಂಚಿಸಿದ್ದಾರೆ.
ವೃದ್ಧೆ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಹಣ ಪಡೆಯಲು ಬ್ಯಾಂಕ್ ಗೆ ಬಂದಿದ್ದಾರೆ. ಆಗ ಬ್ಯಾಂಕ್ ಮ್ಯಾನೇಜರ್ ಸಿಸಿಬಿ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬ್ಯಾಂಕಿಗೆ ಬಂದು ಅಜ್ಜಿಯನ್ನು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಏನೂ ಹೇಳಿಲ್ಲ. ಆಕೆಗೆ ಧೈರ್ಯ ತುಂಬಿದ ಬಳಿಕ ಡಿಜಿಟಲ್ ಅರೆಸ್ಟ್ ಬಗ್ಗೆ ಹೇಳಿದ್ದಾರೆ.
ತಕ್ಷಣ ಪೊಲೀಸರು ವೃದ್ಧೆಯಿಂದ ದೂರು ಪಡೆದಿದ್ದಾರೆ. ವಿದೇಶದಲ್ಲಿರುವ ಅವರ ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿ ದೆಹಲಿ, ಮುಂಬೈ, ಅಲಹಾಬಾದ್ ಮೂಲದ ಐವರನ್ನು ಬಂಧಿಸಿದ್ದಾರೆ. ವೃದ್ಧೆಯಿಂದ ಹಣ ಲೂಟಿ ಮಾಡಿ 22 ಬೇರೆ ಬೇರೆ ಬ್ಯಾಂಕ್ ಗಳಿಗೆ ವರ್ಗಾಯಿಸಿದ್ದಾರೆ. 60 ಲಕ್ಷ ರೂಪಾಯಿದ್ದ ಖಾತೆಯನ್ನು ಸೀಜ್ ಮಾಡಿದ್ದು, ಉಳಿದ ಖಾತೆಗಳ ತನಿಖೆ ನಡೆಸಿದ್ದಾರೆ. ಸಂತ್ರಸ್ತೆ ವೃದ್ಧೆ ಇತ್ತೀಚೆಗೆ ಬೆಲೆಬಾಳುವ ಆಸ್ತಿಯನ್ನು ಮಾರಾಟ ಮಾಡಿದ್ದರಿಂದ ಕೋಟ್ಯಾಂತರ ರೂಪಾಯಿ ಬಂದಿತ್ತು. ಈ ಬಗ್ಗೆ ಹೇಗೆ ತಿಳಿದುಕೊಂಡ ಕಿರಾತಕರು ಈ ಕೃತ್ಯವೆಸಗಿದ್ದಾರೆ.



