LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ಪ್ರಜಾಪ್ರಭುತ್ವದ ಮೂರು ಮಹಾನ್ ಕ್ರಾಂತಿಗಳು

ವಿಶೇಷ ಲೇಖನ: ಬಸವ ಪಾಟೀಲ್, ಲಂಡನ್- ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಾಂಪ್ರದಾಯಿಕ ಮತ್ತು ಜಾತಿ ಆಧಾರಿತ ಸಮಾಜದ ಮೇಲೆ ತಂದೆರಡಿದ ಮಹತ್ತರ ಕ್ರಾಂತಿಗಳು ಮತ್ತು ಇಂದಿನ ಸವಾಲುಗಳು ಇಲ್ಲಿವೆ.

1. ಮತದಾನದ ಹಕ್ಕು ಮತ್ತು ಸ್ವಾಭಾವಿಕ ಸವಾಲುಗಳು

1950 ಜನವರಿ 26 ರಂದು ಭಾರತೀಯ ಸಂವಿಧಾನ ಜಾರಿಗೆ ಬಂದಾಗ, ಯಾವುದೇ ಜಾತಿ, ಧರ್ಮ, ಲಿಂಗ ಅಥವಾ ಆಸ್ತಿಯ ಭೇದಭಾವವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ 'ಒಂದು ಮತ, ಒಂದು ಮೌಲ್ಯ' ಎಂಬ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು (Universal Adult Suffrage) ನೀಡಲಾಯಿತು. ಬ್ರಿಟನ್ ಸೇರಿದಂತೆ ಪ್ರಪಂಚದಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ ನಡೆದ 'ಸಫ್ರೆಜೆಟ್' (Suffragette) ಚಳವಳಿಗಳ ಪ್ರೇರಣೆಯೂ ಇದರ ಹಿಂದೆ ಇತ್ತು. ಇದು ಭಾರತೀಯ ಸಮಾಜದಲ್ಲಿದ್ದ ಶತಮಾನಗಳ ವರ್ಣಾಶ್ರಮ ಧರ್ಮ ಮತ್ತು ಜಾತಿವಾದದ ಅಧಿಪತ್ಯಕ್ಕೆ ಬ್ರಹ್ಮಾಸ್ತ್ರವಾಯಿತು. ಮತದಾನವನ್ನು ನಿರಪೇಕ್ಷವಾಗಿ ನಡೆಸಲು ಸಂವಿಧಾನದ ವಿಧಿ ೩೨೪ರ ಅಡಿಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆಯನ್ನು ನೀಡಲಾಯಿತು.

ಆದರೆ, ಇಂದು ಈ ಪ್ರಜಾಸತ್ತಾತ್ಮಕ ಹಕ್ಕಿನ ಮೇಲೆ ಹಲವು ಕರಿನೆರಳುಗಳು ಬೀಳುತ್ತಿವೆ. 'ಗೆರ್ರಿಮ್ಯಾಂಡರಿಂಗ್' (Gerrymandering - ಅಸಮರ್ಪಕ ಕ್ಷೇತ್ರ ವಿಂಗಡಣೆ) ಮಾದರಿಯ ತಂತ್ರಗಳು, ಮತದಾರರ ಪಟ್ಟಿಯಲ್ಲಿ ಕ್ಲರಿಕಲ್ ತಪ್ಪುಗಳ ನೆಪವೊಡ್ಡಿ ಸಾವಿರಾರು ಮತಗಳನ್ನು ತೆಗೆದುಹಾಕುವುದು ಹಾಗೂ ಚುನಾವಣಾ ಆಯೋಗದ ಸ್ವಾಯತ್ತತೆಯ ಮೇಲಿನ ಅಪನಂಬಿಕೆಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

ಮತದಾನದ ಹಕ್ಕು ರಕ್ಷಣೆಗೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಾಗರಿಕ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಎ.ಡಿ.ಆರ್. (Association for Democratic Reforms – ಸ್ಥಾಪನೆ: 1999) ನಂತಹ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನಲ್ಲಿ ಇವಿಎಂ-ವಿವಿಪ್ಯಾಟ್ ದೃಢೀಕರಣ ಹಾಗೂ 'ಚುನಾವಣಾ ಬಾಂಡ್‌ಗಳ' ಅಸಂವಿಧಾನಿಕತೆಯನ್ನು ಬಯಲಿಗೆಳೆಯಲು ಶ್ರಮಿಸಿದರೆ, ಇತ್ತ ಕರ್ನಾಟಕದಲ್ಲಿ 'ಜಾಗೃತ ಕರ್ನಾಟಕ' ಸಂಸ್ಥೆಯು ಡಾ. ವಾಸು ಹೆಚ್.ಎಸ್. ಮತ್ತು ಅವರ ಸಂಗಡಿಗರ ನೇತೃತ್ವದಲ್ಲಿ ಮತದಾರರ ಪಟ್ಟಿಯ ತಾಂತ್ರಿಕ ಲೋಪದೋಷಗಳು ಹಾಗೂ ಅಕ್ರಮಗಳ ಕುರಿತು ಆಳವಾದ ವಿಶ್ಲೇಷಣೆ ನಡೆಸಿ ಬೃಹತ್ ಜಾಗೃತಿ ಅಭಿಯಾನಗಳನ್ನು ಮಾಡುತ್ತಿದೆ. ಆದರೆ, ಇಂತಹ ಪ್ರಜಾಸತ್ತಾತ್ಮಕ ಚಿಂತನೆಗಳು ಮತ್ತು ರಾಜಕೀಯ ಪಕ್ಷಗಳ ಒಮ್ಮತ/ವಿಮರ್ಶೆಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸೂಕ್ತವಾಗಿ ಪ್ರಸಾರವಾಗದಿರುವುದು ದುರಂತ.

ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ (ಅಂದಾಜು ೬೫% ರಿಂದ ೭೦%) ಹೆಚ್ಚಿದ್ದರೂ, ಮತದಾರರನ್ನು ಪ್ರಭಾವಿಸುವ ಮುಖ್ಯ ಅಂಶಗಳು ಇಂದಿಗೂ ಹಣ, ಜಾತಿ ಮತ್ತು ಧರ್ಮವೇ ಆಗಿವೆ. ಸಾಕ್ಷರತೆ ಹೆಚ್ಚುತ್ತಿದ್ದರೂ ಪ್ರಾಮಾಣಿಕ ಮತ್ತು ನಾಯಕತ್ವ ಗುಣವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದಕ್ಕೆ ಮಾಹಿತಿಯ ಕೊರತೆಗಿಂತ ಹೆಚ್ಚಾಗಿ, ಸರಿ-ತಪ್ಪುಗಳನ್ನು ವಿವೇಚಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣವಾಗಿದೆ.

2. ಪ್ರಾತಿನಿಧ್ಯ: ಶೋಷಿತರ ಸಂವಿಧಾನಾತ್ಮಕ ಹಕ್ಕು

ಹನ್ನೆರಡನೇ ಶತಮಾನದ ಬಸವಾದಿ ಶರಣರ ಜಂಗಮತ್ವ ಮತ್ತು ದಾಸೋಹ ತತ್ವಗಳು, ಊರಿನ ಕಟ್ಟಕಡೆಯ ಅಸ್ಪೃಶ್ಯರನ್ನೂ ಮನುಷ್ಯರೆಂದು ಗೌರವಿಸಿದ ಮಹಾ ಮಾನವತಾವಾದಿ ವಿಪ್ಲವವಾಗಿತ್ತು. ಹುಟ್ಟಿನಿಂದ ಪ್ರತಿಯೊಬ್ಬನೂ 'ವಿಶ್ವಮಾನವ' ಎಂಬ ತತ್ವಕ್ಕೆ ಸಾಕ್ಷಿಯಾಗಿತ್ತು. ಶತಮಾನಗಳಿಂದ "ನಾವು ಪಾಪ ಮಾಡಿ ಹುಟ್ಟಿದವರು", "ನಾವು ಕಾಲಿನಿಂದ ಹುಟ್ಟಿದವರು", "ನಾವು ಪಾದಸೇವಕರು" ಎಂಬಂತಹ ಅಮಾನವೀಯ, ಸಂವೇದನಾರಹಿತ ಸಾಂಸ್ಕೃತಿಕ ತಾರತಮ್ಯಕ್ಕೆ ಒಳಗಾಗಿದ್ದ ಸಮಾಜಕ್ಕೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು 'ಪ್ರಾತಿನಿಧ್ಯ'ದ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿತು.

ಆದರೆ, ಇಂದು ಸಂವಿಧಾನಾತ್ಮಕ 'ಪ್ರಾತಿನಿಧ್ಯ'ಕ್ಕೂ ಮತ್ತು 'ಮೀಸಲಾತಿ'ಗೂ ಇರುವ ಆಶಯವನ್ನು ಅರ್ಥಮಾಡಿಕೊಳ್ಳದೆ ವಿರೋಧಿಸುವ ಧೋರಣೆ ಹೆಚ್ಚಾಗುತ್ತಿದೆ. "35% ಅಂಕ ಪಡೆದು ಮೀಸಲಾತಿಯಲ್ಲಿ ಬಂದ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತೀರಾ?" ಎಂಬ ಪ್ರಶ್ನೆಗಳನ್ನು ಎಸೆಯುವ ಮನಸ್ಥಿತಿಗಳಿಗೆ, ನಿಜವಾಗಿ ಎಷ್ಟು ಜನ ಹಾಗೆ ಬಂದಿದ್ದಾರೆ ಎಂಬ ಸಾಂಖಿಕ ಸಾಕ್ಷ್ಯಗಳಿರುವುದಿಲ್ಲ. (ಏಕೆಂದರೆ, ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯಲ್ಲಿ ಪ್ರತಿಯೊಬ್ಬರೂ ಅರ್ಹತಾ ಪರೀಕ್ಷೆಯಾದ NEET ಮುಖಾಂತರವೇ ಉತ್ತೀರ್ಣರಾಗಬೇಕಿರುತ್ತದೆ).

 ಸಂವಿಧಾನದ ಮೂಲ ಆಶಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಪ್ರಾತಿನಿಧ್ಯ ನೀಡುವುದಾಗಿದ್ದರೂ, 103ನೇ ಸಂವಿಧಾನ ತಿದ್ದುಪಡಿ (2019)ಯ ಮೂಲಕ ಇ.ಡಬ್ಲ್ಯೂ.ಎಸ್ (EWS - ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲಾತಿಯನ್ನು ತರಲಾಯಿತು. ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುವ ವರ್ಗವೇ, ಆರ್ಥಿಕ ಮೀಸಲಾತಿಯನ್ನು ಸ್ವಾಗತಿಸುವಾಗ ಅವರ ವರ್ಣಾಶ್ರಮದ ಸಿದ್ಧಾಂತವು ಮಾರ್ಕ್ಸ್ ವಾದಿ ಆಲೋಚನೆಯಾಗಿ ಬದಲಾಗುವುದು ವೈಪರೀತ್ಯ. ಇದನ್ನು ಪ್ರಶ್ನಿಸಿದವರನ್ನು "ಅರ್ಬನ್ ನಕ್ಸಲ್" ಎಂದು ನಿಂದಿಸುವ ಪ್ರವೃತ್ತಿ ಬೆಳೆದಿದೆ.

3. ಪಂಚಾಯತ್ ರಾಜ್: ಸ್ಥಳೀಯ ಪ್ರಭುತ್ವ ಮತ್ತು ಜಾತಿ ಗೋಡೆಗಳ ಪತನ

ಮತದಾನದ ಹಕ್ಕು ಮತ್ತು ಸಂವಿಧಾನಾತ್ಮಕ ಪ್ರಾತಿನಿಧ್ಯದ ಕ್ರಾಂತಿಯ ಮುಂದುವರಿದ ಭಾಗವೇ 'ಪಂಚಾಯತ್ ರಾಜ್ ಕಾಯ್ದೆ'. ಭಾರತದ ಹಳ್ಳಿಗಳು ಸಾಂಪ್ರದಾಯಿಕವಾಗಿ ಮೇಲ್ಜಾತಿಯವರ, ಭೂರಹಿತರ ಮೇಲೆ ದಬ್ಬಾಳಿಕೆ ನಡೆಸುವ ಜಾತಿವಾದಿ ಗಣ್ಯರ ಪಾಲಿನ ಅಡ್ಡಾಗಳಾಗಿದ್ದವು. 'ಗ್ರಾಮ ಸ್ವರಾಜ್ಯ' ಮತ್ತು ಧಾರ್ಮಿಕ ಸಂಪ್ರದಾಯಗಳ ಹೆಸರಿನಲ್ಲಿ ಕಟ್ಟಕಡೆಯ ಜನರನ್ನು ಅಧಿಕಾರದಿಂದ ಸಂಪೂರ್ಣವಾಗಿ ಹೊರಗಿಡಲಾಗಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪರಿಕಲ್ಪನೆಯ ಫಲವಾಗಿ ಬಂದ 73ನೇ ಸಂವಿಧಾನ ತಿದ್ದುಪಡಿ (1992/93- ಪಂಚಾಯತ್ ರಾಜ್ ಕಾಯ್ದೆ) ಭಾರತದ ಗ್ರಾಮೀಣ ಭಾಗದಲ್ಲಿ ನೈಜ ಪ್ರಜಾಸತ್ತಾತ್ಮಕ ಸ್ಪೂರ್ತಿಯನ್ನು ಬಿತ್ತಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಶೇಕಡಾ ೩೩ ಕ್ಕಿಂತ ಹೆಚ್ಚು ಮಹಿಳೆಯರಿಗೆ ಪಂಚಾಯತ್ ಮಟ್ಟದಲ್ಲಿ ರಾಜಕೀಯ ಪ್ರಾತಿನಿಧ್ಯ ಮತ್ತು ಮೀಸಲಾತಿ ಕಡ್ಡಾಯಗೊಳಿಸುವ ಮೂಲಕ, ಶತಮಾನಗಳಿಂದ ಹಳ್ಳಿಗಳನ್ನು ಆಳುತ್ತಿದ್ದ ಜಾತಿವಾದಿ ಪ್ರಭುತ್ವದ ಗೋಡೆಗಳನ್ನು ಚೂರುಚೂರು ಮಾಡಲಾಯಿತು. ಯಾರು ಹಳ್ಳಿಯ ಸವರ್ಣೀಯರ ಮನೆ ಬಾಗಿಲಲ್ಲಿ ನಿಲ್ಲಬೇಕಿತ್ತೋ, ಅವರೇ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಸದಸ್ಯರಾಗಿ ಅಧಿಕಾರ ಚಲಾಯಿಸುವಂತಹ ಪ್ರಜಾಸತ್ತಾತ್ಮಕ ಕ್ರಾಂತಿಗೆ ಇದು ನಾಂದಿ ಹಾಡಿತು.

4. ಜೆನ್-ಝಿ (Gen Z) ತಲೆಮಾರಿನ ಶಕ್ತಿ ಮತ್ತು ಬದಲಾದ ರಾಜಕಾರಣ

ಸ್ವಾತಂತ್ರ್ಯೋತ್ತರ ಭಾರತದ 7-8ನೇ ಪಿಳಿಗೆಯಾಗಿರುವ ಇಂದಿನ ಯುವಸಮುದಾಯದ (Gen Z) ಶಕ್ತಿ ಮತ್ತು ರಾಜಕೀಯ ಪ್ರಭಾವ ಸಾಮಾನ್ಯವಾದುದಲ್ಲ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಮಂತ್ರಿಯೇ ಇವತ್ತು ಯುವಜನರನ್ನು ತಲುಪಲು, ಅವರ ಗಮನ ಸೆಳೆಯಲು ಮತ್ತು ಮನವೊಲಿಸಲು 'ರೀಲ್ಸ್' (Reels) ಮಾಡಬೇಕಾದ, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳ ಜೊತೆ ತೊಡಗಿಸಿಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗಿದೆ!

ಸಾಂಪ್ರದಾಯಿಕ ರಾಜಕಾರಣದ ಮುಂದೆ ಯುವಜನತೆ ತಲೆಬಾಗುವ ಬದಲು, ದೇಶದ ಅತ್ಯುನ್ನತ ರಾಜಕೀಯ ನಾಯಕರೇ ಯುವಜನತೆಯ ಮಾಧ್ಯಮ ಮತ್ತು ಸಂಸ್ಕೃತಿಗೆ ತಕ್ಕಂತೆ ಬದಲಾಗುವಂತೆ ಮಾಡಿರುವುದು ಈ ತಲೆಮಾರಿನ ನಿಜವಾದ ಶಕ್ತಿ. ಕೆಲವು ತಲೆಮಾರುಗಳಿಂದ ಬಿತ್ತಲ್ಪಟ್ಟ ಮೌಢ್ಯಗಳು, ದ್ವೇಷದ ರಾಜಕಾರಣ ಮತ್ತು ಅಹಂಕಾರಗಳನ್ನು ನಿಮ್ಮ ಹಾಸ್ಯಪ್ರಜ್ಞೆ, ಸೃಜನಶೀಲತೆ, ವಿಡಂಬನೆ ಹಾಗೂ ನಿರ್ಭೀತ ಡಿಜಿಟಲ್ ಜೀವಂತಿಕೆಯಿಂದ ತಿಳಿಗೊಳಿಸುತ್ತಿದ್ದೀರಿ. ಹಳ್ಳಿಗಾಡಿನಲ್ಲಿ ಬೆಳೆದು ಪ್ರಾತಿನಿಧ್ಯವನ್ನು ಬಯಸುವ ನನಗೆ ನಿಮ್ಮ ಈ ಸೌಹಾರ್ದಯುತ ಸ್ವತಂತ್ರ ಮನೋಭಾವ ಭರವಸೆ ನೀಡುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿರುವ ನಿಮ್ಮಂತಹ ದಾಸೋಹಿ ಜೀವಿಗಳಿಗೆ ಸಾವಿರ ಶರಣುಗಳು. ಕೊನೆಯ ಮಾತು ನೆನಪಿಡಿ: ಮತದಾನ ನಮ್ಮ ಬಲ, ಪ್ರಾತಿನಿಧ್ಯ ನಮ್ಮ ಸಂವಿಧಾನಾತ್ಮಕ ಹಕ್ಕು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST