ಪ್ರಜಾಸ್ತ್ರ ಸುದ್ದಿ
ಅಳ್ನಾವರ(Alnavar): ತಾಲೂಕಿನಾದ್ಯಂತ ಸೋಮವಾರ ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಯು ಸಾಕಷ್ಟು ಆವಾಂತರವನ್ನೇ ಸೃಷ್ಟಿಸಿದೆ. ಮಳೆಯು ರೈತರಿಗೆ ವರದಾನವಾಗದೆ ಶಾಪವಾಗಿ ಪರಿಣಮಿಸಿದೆ. ತಾಲೂಕಿನ ಅಂಬೋಳ್ಳಿ ಗ್ರಾಮದ ರೈತರಾದ ರವಿ ಹರಿಜನ ಹಾಗೂ ಅಬೂಬಕರ ಹಾವೇರಿಪೇಟ್ ಎಂಬುವವರ ಮಾವಿನ ತೋಟವೂ ಮಳೆ ಗಾಳಿಗೆ ನೆಲಸಮಗೊಂಡಿವೆ.
ಸುಮಾರು 100ಕ್ಕೂ ಹೆಚ್ಚು ಆಪೂಸ್ ಮಾವಿನ ಮರಗಳು ಧರೆಗುರುಳಿವೆ. ಕಳೆದ 30 ವರ್ಷಗಳಿಂದ ರೈತರಿಗೆ ಫಲ ಕೊಡುವ ಮೂಲಕ ಬದುಕಿಗೆ ಆಸರೆಯಾಗಿದ್ದವು. ಆದರೆ, ಪ್ರಕೃತಿ ವಿಕೋಪಕ್ಕೆ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿಗೆ ತಾಲೂಕೆ ಮಳೆ ಗಾಳಿಗೆ ಕಂಗಾಲಾಗಿದೆ. ತಹಶೀಲ್ದಾರ್ ಆಗಲಿ ಯಾವೊಬ್ಬ ಮೇಲ್ದರ್ಜೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಸ್ಥಳೀಯರ ನೋವಿಗೆ ಸ್ಪಂದಿಸಿಲ್ಲ ಎಂಬುದು ತಾಲೂಕಿನ ಜನತೆ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲದ ಆರಂಭದಲ್ಲಿಯೇ ಇಷ್ಟೊಂದು ಹಾನಿ ಆಗಿದೆ. ಇನ್ನು ಮುಂದೆ ಹೇಗೆ ಅನ್ನೋ ಆತಂಕ ಜನತೆಯಲ್ಲಿ ಮೂಡಿದೆ.
ಇನ್ನೊಂದು ಕಡೆ ಮನೆಯ ಹಂಚು, ಸೀಟುಗಳು ಸಹ ಹಾರಿ ಹೋಗಿವೆ. ಇದರಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಅಂಬೋಳ್ಳಿ-ಅಳ್ನಾವರ ಮುಖ್ಯರಸ್ತೆಯ ಮೇಲೆ ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದು ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿತ್ತು. ಮಂಗಳವಾರವೂ ಸಹ ಮಳೆಯ ಅಬ್ಬರ ಮುಂದುವರೆದಿದೆ.



