ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಜಾಗಕ್ಕೆ ಡಿ.ಕೆ ಶಿವಕುಮಾರ್ ಬರುವುದು ಬಹುತೇಕ ನಿಶ್ಚಿತವಾಗಿದೆ. ಶನಿವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿರ್ಗಮಿತ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪಕ್ಷದ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಸಿಎಲ್ ಪಿ ನಾಯಕನನ್ನಾಗಿ ಡಿ.ಕೆ ಶಿವಕುಮಾರ್ ಆಯ್ಕೆ ಮಾಡುವುದು ನಿಚ್ಚಳವಾಗಿದೆ. ಇದಾದ ಬಳಿಕ ಪ್ರಮಾಣ ವಚನ ಕಾರ್ಯಕ್ರಮದ ದಿನಾಂಕ, ಸಮಯ ನಿಗದಿಯಾಗಲಿದೆ. ಭಾನುವಾರ ಅಥವ ಸೋಮವಾರ ನಡೆಯುವ ಸಾಧ್ಯತೆಯಿದೆ. ಈ ವೇಳೆ ಎಷ್ಟು ನಾಯಕರು ಡಿಸಿಎಂ ಆಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಅನ್ನೋ ಕುತೂಹಲಕ್ಕೂ ಇಂದು ಸಂಜೆ ತೆರೆ ಬೀಳಲಿದೆ. ಯಾಕಂದರೆ, ಈಗಾಗ್ಲೇ ಡಿ.ಕೆ ಶಿವಕುಮಾರ್ ಶುಕ್ರವಾರ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.



