ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಖ್ಯಾತ ವೈದ್ಯರು, ಪುರಸಭೆ ಮಾಜಿ ಅಧ್ಯಕ್ಷರಾದ ಡಾ.ಶಾಂತವೀರ ಮನಗೂಳಿ ಅವರು ಶನಿವಾರ ತಮ್ಮ 50ನೇ ಜನ್ಮ ದಿನವನ್ನು ಸಮಾಜಮುಖಿ ಕಾರ್ಯದ ಮೂಲಕ ಆಚರಿಸಿಕೊಂಡಿದ್ದಾರೆ. ನಗರದ ಮನಗೂಳಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
ಇತ್ತೀಚೆಗೆ ಅಕಾಲಿಕ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ತಾಲೂಕಿನ ಮೋರಟಗಿ ಗ್ರಾಮದಲ್ಲಿ ಮೃತಪಟ್ಟ ಗುರುನಾಥ ಬಡಗೇರ ಕುಟುಂಬಸ್ಥರಿಗೆ ಆರ್ಥಿಕ ನೆರವು, ಬಾಣಂತಿ ಹಾಗೂ ಕೂಸು ಮೃತಪಟ್ಟ ಘಟನೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿತ್ತು. ಮೃತ ಮೈತ್ರಾ ಸುಂಗಠಾಣ ಕುಟುಂಬಕ್ಕೂ ಸಹ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ತಮ್ಮ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದ್ದಾರೆ.
ಇನ್ನು ಮನಗೂಳಿ ಆಸ್ಪತ್ರೆಯ ಆವರಣದಲ್ಲಿರುವ ತಂದೆ, ಮಾಜಿ ಸಚಿವ ದಿವಂಗತ ಎಂ.ಸಿ ಮನಗೂಳಿ ಅವರು ಪುತ್ಥಳಿಗೆ ಪತ್ನಿ ಡಾ.ಸಂಧ್ಯಾ ಹಾಗೂ ಮಕ್ಕಳೊಂದಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ತಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜಿಕ ಕಾರ್ಯಗಳನ್ನು ಮಾಡುತ್ತೇನೆ. ತಮ್ಮ ಬೆಂಬಲ, ಹಾರೈಕೆಗೆ ಧನ್ಯವಾದಗಳು ಎಂದರು. ಮನಗೂಳಿ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ತಾಲೂಕಿನ ಜನತೆಗೆ 50ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.



