ಪ್ರಜಾಸ್ತ್ರ ಸುದ್ದಿ
ರಾಯಚೂರು(Raichur): ಭಾನುವಾರ ಮುಂಜಾನೆ ಸುರಿದ ಮಳೆಗೆ ತಾತ್ಕಾಲಿಕ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ಸಿಂಧನೂರು ತಾಲೂಕಿನ ಚಿರತ್ನಾಳ ಹಾಗೂ ಬೊಮ್ಮನಾಳ ಗ್ರಾಮಗಳ ನಡುವೆ ಐದು ವರ್ಷಗಳಿಂದ ಸೇತುವೆ ನಿರ್ಮಾಣ ಕೆಲಸ ನಡೆದಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಭಾರಿ ಮಳೆಯಿಂದ ಅದು ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು 8 ಕಿಲೋ ಮೀಟರ್ ಸುತ್ತಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಲಿಂಗಸಗೂರು ತಾಲೂಕಿನಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ನೆಲಮಟ್ಟದಿಂದ ಸೇತುವೆಗಳು ಮುಳುಗಿವೆ. ಹಟ್ಟಿ ಚಿನ್ನದ ಗಣಿ ಹತ್ತಿರದ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಜಾಗರನಂದಿಹಾಳ ಗ್ರಾಮದ ಸಂಪರ್ಕ ಕುಡಿದು ಹೋಗಿದೆ. ಮುದಗಲ್ ಗ್ರಾಮದಲ್ಲಿ ಬೆಳೆ ಹಾನಿಯಾಗಿವೆ. ಮಸ್ಕಿ ಪಟ್ಟಣದಲ್ಲಿ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.



