ಪ್ರಜಾಸ್ತ್ರ ಸುದ್ದಿ
ದುಬೈ(Dubai): ಮಹಿಳಾ ಏಷ್ಯ ಕಪ್-2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತೀಯ ವನಿತೆಯರ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 8ನೇ ಬಾರಿಗೆ ಏಷ್ಯ ಕಪ್ ತನ್ನ ಮುಡಿಗೇರಿಸಿಕೊಂಡಿದೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದರು.
ಸ್ಮೃತಿ ಮಂದಾನಾ 59, ಶಫಾಲಿ ವರ್ಮಾ 68 ರನ್ ಗಳ ಭರ್ಜರಿ ಆಟದಿಂದಾಗಿ ಸವಾಲಿನ ಗುರಿ ನೀಡುವಂತಾಯಿತು. ನಾಯಕಿ ಕೌರ್ 14, ರಿಷಾ ಘೋಷ್ 17, ದೀಪ್ತಾ ಶರ್ಮಾ 5, ಭಾರತಿ ಫುಲುಮಾಲಿ ಅಜೇಯ 2, ಗುನ್ಲನ್ ಕಮಲಿನಿ ಅಜೇಯ 15 ರನ್ ಗಳಿಸಿದರು. ಶ್ರೀಲಂಕಾ ಪರ ಮಿಥಾಲಿ, ನಾಯಕಿ ಚಾಮರಿ ಅಟಪಟ್ಟು, ಹೇವಾ ಮುನಸಿಂಘಲಾಗೆ ತಲಾ 1 ವಿಕೆಟ್ ಪಡೆದರು.
184 ರನ್ ಗಳ ಗುರಿ ಬೆನ್ನು ಹತ್ತಿದ ಲಂಕಾ ಟೀಂ ಅನ್ನು ಶ್ರೀಚರಣಿ ಹಾಗೂ ದೀಪ್ತಿ ಶರ್ಮಾ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ನಾಯಕಿ ಚಾಮರಿ 36, ನಿಲಾಕ್ಷಿ 22, ವಿಶ್ಮಿ 20 ರನ್ ಹೊರತು ಪಡಿಸಿದರೆ ಉಳಿದವರು ಒಂದಂಕಿಗೆ ಔಟ್ ಆದರು. ಅಂತಿಮವಾಗಿ 20 ಓವರ್ ಗಳಲ್ಲಿ 111 ರನ್ ಗಳಿಗೆ ಆಲೌಟ್ ಆದರು. ಇದರೊಂದಿಗೆ ಭಾರತ 72 ರನ್ ಗಳೊಂದಿಗೆ ಭರ್ಜರಿ ವಿಜಯ ಸಾಧಿಸಿತು. ಭಾರತ ಪರ ಶ್ರೀಚರಣಿ 4, ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಕ್ರಾಂತಿ, ಶಫಾಲಿ, ಪ್ರೇಮಾ ರಾವತ್ ತಲಾ 1 ವಿಕೆಟ್ ಪಡೆದರು.
ಮೊಹ್ಸಿನ್ ನಕ್ವಿ ಕಡೆಯಿಂದ ಪ್ರಶಸ್ತಿ ನಿರಾಕರಣೆ: ಏಷ್ಯ ಕಪ್ ಗೆದ್ದ ಭಾರತ ತಂಡ ಏಷ್ಯ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಕ್ವಿ ಕಡೆಯಿಂದ ಪ್ರಶಸ್ತಿ ಪಡೆಯಲು ನಿರಾಕರಿಸಿತು. ರನ್ನರ್ ಅಪ್ ತಂಡ ಶ್ರೀಲಂಕಾದ ನಾಯಕಿ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ಪುರುಷರ ಏಷ್ಯ ಕಪ್ ಗೆದ್ದಾಗ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಹ ನಕ್ವಿ ಕಡೆಯಿಂದ ಪ್ರಶಸ್ತಿ ಸ್ವೀಕರಿಸಿರಲಿಲ್ಲ.


