ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪ್ರಜಾಸ್ತ್ರ ಡಿಜಿಟಲ್ ಮೀಡಿಯಾದ 6ನೇ ವಾರ್ಷಿಕೋತ್ಸವ ಹಾಗೂ ಪ್ರಜಾ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 28ರಂದು ಅದ್ಧೂರಿಯಾಗಿ ನೆರವೇರಿತು. ಸಿಂದಗಿ ನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಮಕ್ಕಳ ಸಾಹಿತಿ ಹಾಗೂ ಶಿಕ್ಷಕರಾದ ಎಸ್.ಎಸ್ ಸಾತಿಹಾಳ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಾಧ್ಯಮಗಳು ಇಂದು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿಯೂ ನಾಗೇಶ ತಳವಾರ ಅವರು ಪ್ರಜಾಸ್ತ್ರ ವೆಬ್ ಪತ್ರಿಕೆಯ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಸಣ್ಣದಲ್ಲ. ಇಂತಹ ಕಾರ್ಯ ಮಾಡುತ್ತಿರುವ ಪ್ರಜಾಸ್ತ್ರ ಡಿಜಿಟಲ್ ಮೀಡಿಯಾ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಿಂದಗಿ ವಕೀಲರ ಸಂಘದ ತಾಲೂಕಾಧ್ಯಕ್ಷರಾದ ಎಸ್.ಬಿ ಪಾಟೀಲ ಅವರು, ಪ್ರಜಾಸ್ತ್ರ ಡಿಜಿಟಲ್ ಮೀಡಿಯಾ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು. ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ನಾಗರಬೆಟ್ಟ ಅವರು ಮಾತನಾಡಿ, ಪ್ರಜಾಸ್ತ್ರ ಡಿಜಿಟಲ್ ಮೀಡಿಯಾ ಸಾಕಷ್ಟು ಜನಪರ ಕೆಲಸ ಮಾಡುತ್ತಿದೆ. ಇದೆ ರೀತಿ ಮುಂದುವರೆಯಲಿ. ನೆಮ್ಮೆಲ್ಲರ ಬೆಂಬಲ ಇರುತ್ತದೆ ಎಂದರು.

‘ಪ್ರಜಾ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮ ಕ್ಷೇತ್ರದಿಂದ ಚಂದ್ರಕಾಂತ ಸೊನ್ನದ, ಸಾಹಿತ್ಯ ಕ್ಷೇತ್ರದಿಂದ ಡಾ.ರಮೇಶ ಕತ್ತಿ, ಶಿಕ್ಷಣ ಕ್ಷೇತ್ರದಿಂದ ಅಡಿವೆಪ್ಪ ಭಾವಿಕಟ್ಟಿ ಹಾಗೂ ಕ್ಷೇತ್ರದಿಂದ ನಾಗಪ್ಪ ಶಿವೂರ ಅವರಿಗೆ ‘ಪ್ರಜಾ ಸಿರಿ’ ಪ್ರಶಸ್ತಿ ಪದಾನ ಮಾಡಲಾಯಿತು. ಈ ಪ್ರಶಸ್ತಿಯು 3 ಸಾವಿರ ರೂಪಾಯಿ ಗೌರವಧನ, ಪ್ರಶಸ್ತಿ ಫಲಕ ಒಳಗೊಂಡಿದೆ.
ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷರಾದ ಮಹಾಂತೇಶ ನೂಲವಾರ ಅವರು ಮಾತನಾಡಿ, ಒಬ್ಬ ವರದಿಗಾರನಾಗಿ ಕೆಲಸ ಮಾಡುವುದು ಬೇರೆ. ಸಂಪಾದಕನಾಗಿ ಕಾರ್ಯನಿರ್ವಹಿಸುವುದು ಬೇರೆ. ಸಂಪಾದಕನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಅದನ್ನು ನಿಭಾಯಿಸುವುದರ ಜೊತೆಗೆ ಸಾಧಕರನ್ನು ಗುರುತಿಸುತ್ತಿರುವ ಪ್ರಜಾಸ್ತ್ರ ಡಿಜಿಟಲ್ ಮೀಡಿಯಾ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಕೋರಿದರು. ಪ್ರಜಾ ಸಿರಿ ಪ್ರಶಸ್ತಿ ಪುರಸ್ಕೃತರಾದ ಡಾ.ರಮೇಶ ಕತ್ತಿ, ಅಡಿವೆಪ್ಪ ಭಾವಿಕಟ್ಟಿ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರಜಾಸ್ತ್ರ ಡಿಜಿಟಿಲ್ ಮೀಡಿಯಾ ಸಂಸ್ಥಾಪಕ ಸಂಪಾದಕರಾದ ನಾಗೇಶ ತಳವಾರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಜಾಸ್ತ್ರ ಡಿಜಿಟಿಲ್ ಮೀಡಿಯಾ ಸಹಾಯಕ ಸಂಪಾದಕ ಅಶೋಕ ಬಿರಾದಾರ ನಿರೂಪಿಸಿದರು. ಸಾಹಿತಿ, ಶಿಕ್ಷಕ ರಾಚು ಕೊಪ್ಪ ಸ್ವಾಗತಿಸಿದರು. ರಾಗರಂಜನಿ ಸಂಗೀತಿ ಅಕಾಡಮಿಯ ಪ್ರಕಾಶ ಮೂಡಲಗಿ ಅವರ ತಂಡ ಸ್ವಾಗತ ಗೀತೆ ಹಾಡಿತು. ವಿದ್ಯಾರ್ಥಿನಿ ಅಮೂಲ್ಯ ಕಾಂಬಳೆ ಭರತನಾಟ್ಯ ಪ್ರದರ್ಶಿಸಿದರು. ಸಾಹಿತಿ, ಶಿಕ್ಷಕ ಬಸವರಾಜ ಭೂತಿ ವಂದಿಸಿದರು. ಮಾಧ್ಯಮ ಕ್ಷೇತ್ರದ ಸಹದ್ಯೋಗಿಗಳು, ಶಿಕ್ಷಕರು, ಸಾಹಿತಿಗಳು, ಮುಖಂಡರು, ಸದ್ಗುರು ಕೋಚಿಂಗ್ ಸೆಂಟರ್ ನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



