LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೀಮೆಯ ಒಡಲಲ್ಲಿ ಬತ್ತಿದ ಪ್ರೀತಿ..!

ತೊಂಬತ್ತರ ದಶಕದ ಕವಿತೆಯೂ, ಇವತ್ತಿನ ಕಟು ವಾಸ್ತವವೂ!

ಬರಹ: ಬಸವ ಪಾಟೀಲ ಕೊಂಡಗೂಳಿ, ಲಂಡನ್

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ವಿಜಯಪುರ ಜಿಲ್ಲೆಯ ಹಳ್ಳಿ ಸೀಮೆಯಾಗ ಕುಂತಗೊಂಡು ಕೈಯಾಗ ಹಿಡಿದ ಹಾಳೆಯ ಮ್ಯಾಲ ನಾನೊಂದು ಕವಿತೆ ಗೀಚಿದ್ದೆ"ಭೀಮೆಯುದಡ". ಅವತ್ತಿನ ದಿನಮಾನದಾಗ ನಮ್ಮ ಕಡೆ ನಡಿತಿರ್ದ ರಕ್ತದ ರಾಜಕಾರಣ, ಹಗೆತನ, ಮತ್ತ ಮನುಷ್ಯನ ಮನಸ್ಸಿನಾಗ ನೆಲೆಸಿದ್ದ ಕ್ರೌರ್ಯವನ್ನು ಕಂಡು ಜೀವ ತಲ್ಲಣಿಸಿ ಆ ಸಾಲುಗಳು ಮೂಡಿಬಂದಿದ್ವು.

ಇವತ್ತು ಪರದೇಶದಾಗ ಕುಂತು, ಹಳೇ ಡೈರಿಯಾಗ ಧೂಳು ಹಿಡಿದು ಹೊಂಟಿದ್ದ ಆ ಕಾಗದದ ಹಾಳೆಯನ್ನು ಕೈಯಾಗ ಹಿಡಿದರೆ ಎದೆಯೊಳಗ ಸಣ್ಣ ನಡುಕ ಶುರುವಾಗ್ತದ. ಕಾಲ ಬದಲಾಗೇತಿ, ವಯಸ್ಸು ಮಾಗೇತಿ, ಆದರೆ ನಮ್ಮ ಭೀಮಾ ತೀರದ ಹಣೆಬರಹ ಮಾತ್ರ ಇಂಚಿಷ್ಟೂ ಬದಲಾಗಿಲ್ಲಲ್ಲ ಅನ್ನೋ ಹತಾಶೆ ಕಾಡ್ತದ.

ಆವತ್ತು ಆ ಕವಿತೆಯಾಗ ನಾನೊಂದು ಮಾತು ಬರೆದಿದ್ದೆ: "ಏನೊ ವಿಚಿತ್ರ... ಈ ಭೀಮೆಯ ದಡದಲ್ಲಿ, ಕೆಲವು ಹಂತಕರೆ ಇರುವುದರಿಂದ, ಈ ತೀರದಲ್ಲಿರುವವರೆಲ್ಲಾ ಭೀಮ ತೀರದ ಹಂತಕರೆ?" ನದಿ ಅಂದ್ರ ಜೀವ ಕೊಡುವ ತಾಯಿ, ನಾಗರಿಕತೆಯ ಮೂಲ. ಆದ್ರೆ ನಮ್ಮ ಕಡೆ ಭೀಮೆ ಅಂದ್ರ ಮೊದಲು ನೆನಪಾಗೋದು ರಕ್ತದ ಇತಿಹಾಸ, ಭಯದ ನೆರಳು!

ಜಮೀನಿನ ಬದುವಿನ ಜಗಳಕ್ಕೆ, ಅಣ್ಣ-ತಮ್ಮಂದಿರ ಆಸ್ತಿ ಹಂಚಿಕೆಗೆ, ಇಲ್ಲವೇ ಹಳೇ ದ್ವೇಷಕ್ಕೆ, ಹಸಿರು ಕ್ರಾಂತಿ ಮಾಡಬೇಕಾದ ಯುವಕರು ಕೈಯಾಗ ಕೊಡ್ಲಿ ಬಡಗಿ, ಮಚ್ಚ ಹಿಡಿದು ಬೀದಿಗೆ ಬೀಳ್ತಾರೆ. ಇವತ್ತು ವಿಜಯಪುರ ಜಿಲ್ಲೆಯಾಗ ವರ್ಷಕ್ಕೆ ಕನಿಷ್ಠ 50 ರಿಂದ 80 ಕೊಲೆಗಳು ನಡೀತಾವ ಅಂದ್ರ ನಾವೆತ್ತ ಸಾಗಾತ್ತೇವಿ? ಜಿಲ್ಲೆಯ ಕೋರ್ಟುಗಳಾಗ ನೂರಾರು ತರುಣರು ವಿಚಾರಣಾಧೀನ ಕೈದಿಗಳಾಗಿ ಬದುಕು ಕಳ್ಕೊಳ್ತಾ ಇದ್ದಾರೆ. ಇನ್ನು ಸಾಕ್ಷಿ ನುಡಿಯಬೇಕಾದವರು ಹೆದರಿ ಹಿಂದೆ ಸರಿಯುವುದರಿಂದ, ಅಪರಾಧಿಗಳಿಗೆ ಶಿಕ್ಷೆಯಾಗೋದು ತೀರಾ ಕಡಿಮೆ.

ಪರದೇಶದಾಗ ಕುಂತು ದಿನಾ ಬೆಳಗ್ಗೆ ಮೊಬೈಲ್‌ನಾಗ ವಿಜಯಪುರದ ಕೊಲೆ, ಸುಲಿಗೆ, ರಾಜಕೀಯ ದ್ವೇಷದ ಸುದ್ದಿಗಳನ್ನು ಓದಿದಾಗ ಎದೆ ಚುರ್ ಅನ್ನುತ್ತದೆ. ಮೂವತ್ತು ವರ್ಷಗಳ ಹಿಂದೆ ಕವಿತೆ ಬರೆಯುವಾಗಲೂ ನನ್ನ ಮನಸ್ಸಿನಾಗ ಇಂಥದ್ದೇ ಒಂದು ಅಪರಾಧ ಪ್ರಜ್ಞೆ ಕಾಡಿತ್ತು. ಅದಕ್ಕೇ ಕವಿತೆಯ ಮಧ್ಯದಾಗ ನಾನೇ ಕೈಯಾರೆ ಬರೆದುಕೊಂಡಿದ್ದೆ: "ಅದೆ ದಡದಲ್ಲಿ ಅಕ್ಷರ ಕಲಿತವರು, ಜಗತ್ತಿನ ಇನ್ನೊಂದು ಮುೂಲೆಯಲ್ಲಿ ಕಂಪೂಟರನಲ್ಲಿ ಬೆರಳಾಡಿಸುತ್ತಿಲ್ಲವೆ (ಕಾಯಯಕ ಮಾಡತಿಲ್ಲವೆ)?" ಎಂದು.

ಇಲ್ಲ, ಇದು ಹುಟ್ಟೂರಿನ ಮೇಲಿನ ಅಸಹ್ಯ ಅಲ್ಲ; ಹೆತ್ತ ತಾಯಿಯ ಎದೆ ಸೀಳುತ್ತಿದ್ದರೆ ಆಗುವ ಕರುಳಿನ ಆಕ್ರಂದನ! ಇವತ್ತಿನ ಕೊಲೆಗಳಿಗೆ ಬರೀ ಜಮೀನು, ಹಣ ಅಷ್ಟೇ ಕಾರಣ ಅಲ್ಲ; ನಮ್ಮ ಯುವ ಪೀಳಿಗೆಯನ್ನು ಕಾಡುತ್ತಿರುವ ಅವೈಚಾರೀಕ ಬಡತನ, ದಾಯಾಯಿದಿತನ ಮತ್ತು ಅಹಂಕಾರ ಕಾರಣ. ಜಾತಿಯ ಹೆಸರಿನಲ್ಲಿ ಪ್ರೀತಿ ಮಾಡಿದವರನ್ನು ಹಾದಿ-ಬೀದಿಯಾಗ ಕೊಲ್ಲುವ "ಗೌರವದ ಕೊಲೆಗಳು" (Honor Killings) ನಮ್ಮ ಶರಣರ ನಾಡಿಗೆ ಅಂಟಿದ ದೊಡ್ಡ ಕಳಂಕ. ಬಸವಣ್ಣನವರು, ಸಿದ್ಧರಾಮರು ನಡೆದ ಈ ಪುಣ್ಯಭೂಮಿಯ ಕಲ್ಲು-ಕಲ್ಲಿನಲ್ಲೂ ಕಾಯಕ ಮತ್ತು ದಯೆಯ ಸಂದೇಶ ಇದೆ. ಇಂಥ ನಾಡಿನಾಗ ಪ್ರೀತಿಯ ಚಿಗುರನ್ನೇ ಹೊಸಕಿ ಹಾಕುವ ಕ್ರೌರ್ಯ ಎಲ್ಲಿಂದ ಬಂತು?

ನನ್ನ ಕವಿತೆಯ ಕೊನೆಯ ಸಾಲುಗಳು ಇವತ್ತಿನ ಸಮಾಜಕ್ಕೆ ಕನ್ನಡಿ ಹಿಡಿದ ಹಾಗೆ ಕಾಣ್ತಾವ: "ನಮ್ಮ ಹೃದಯಗಳೇ ಬರಡಾಗಿರುವಾಗ, ಕರುಣೆಯ ಮೋಡಗಳು ಬಡಿಯದೆ, ಪ್ರೀತಿಯ ಮಳೆ ಬರುವಂತಿಲ್ಲವೇ?" ಹೌದು, ಇವತ್ತು ಭೀಮಾ ತೀರದಾಗ ನೀರಿಗೇನೂ ಬರ ಇಲ್ಲ, ಆದ್ರೆ ಮನುಷ್ಯನ ಎದೆಯಾಗ ಕರುಣೆಯ ಬರಗಾಲ ಬಂದೇತಿ. ಇಲ್ಲಿನ ಯುವಕರ ಕೈಗೆ ಆಯುಧಗಳ ಬದಲಾಗಿ ಅಕ್ಷರ ಮತ್ತು ಉದ್ಯೋಗ ಸಿಗಬೇಕಾಗಿದೆ. ಫ್ಯಾಕ್ಷನಿಸಂ ಮತ್ತು ಗೂಂಡಾಗಿರಿಯ ಬೆಂಕಿ ಆರುವ ತನಕ ಈ ನೆಲ ಉದ್ಧಾರ ಆಗಲ್ಲ.

ದೂರದ ಊರಾಗ ಕುಂತಿರುವ ನನ್ನಂಥ ಬರಹಗಾರರಿಗೆ ತವರಿಗೆ ಹೋಗಿ ನ್ಯಾಯಾಲಯದಾಗ ನಿಲ್ಲಲು ಸಾಧ್ಯವಾಗದೇ ಇರಬಹುದು, ಆದರೆ ನಮ್ಮ ಅಕ್ಷರಗಳು ಆಯುಧಗಳಾಗಬಲ್ಲವು. ನಾವು ಬರೆಯುವ ಪ್ರತಿಯೊಂದು ಪದವೂ ಹಾದಿ ತಪ್ಪುತ್ತಿರುವ ಯುವಕರಲ್ಲಿ ವಿವೇಕ ಮೂಡಿಸಬೇಕಾಗಿದೆ. ಸರಕಾರ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಹಿರಿಯರು ಮನಸ್ಸು ಮಾಡಿ ನಮ್ಮ ಯುವಕರನ್ನು ಕ್ರಿಮಿನಲ್ ಲೋಕದಿಂದ ಹೊರತರುವ ಕೆಲಸ ಮಾಡಬೇಕಿದೆ.ಭೀಮೆಯ ಒಡಲು ಇನ್ನುಮುಂದಾದರೂ ರಕ್ತದಿಂದ ಕೆಂಪಾಗುವುದು ನಿಲ್ಲಲಿ, ಶರಣರ ನಾಡಿನಾಗ ಕರುಣೆಯ ಮಳೆ ಸುರಿಯಲಿ ಎಂಬುದೇ ಈ ಕೊಂಡಗೂಳಿಯಂವನ ಹಂಬಲ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST