ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಬಲೇಶ್ವರ ಗ್ರಾಮದಲ್ಲಿರುವ ಅಮೃತ ಸರೋವರದಲ್ಲಿ ಮಹಾತ್ಮ ಗಾಂಧಿ ನರೇಗಾ ಅಡಿ ಹೂಳು ತೆಗೆಯುವ ಕಾಮಗಾರಿ ಸ್ಥಳದಲ್ಲಿ ಪರಿಸರ ದಿನ ಆಚರಿಸಲಾಯಿತು. ತಾಲೂಕು ಪಂಚಾಯ್ತಿ ಇಒ ರಾಮು ಜಿ ಅಗ್ನಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು ಪ್ರತಿ ವರ್ಷ ಜೂನ್ 5 ರಂದು ಪ್ರಪಂಚದಾದ್ಯಂತ ಪರಿಸರ ದಿನ ಆಚರಿಸಲಾಗುತ್ತದೆ ಎಂದರು.
ಬಹುಗುಣ ತಿಮ್ಮಕ್ಕ ಹಸಿರನ್ನೇ ಉಸಿರು ಎಂದವರು. ಈ ಆಚರಣೆಯ ಉದ್ದೇಶವೆಂದರೆ ಮಾಲಿನ್ಯ ತಡೆಗಟ್ಟುವುದು, ಗಿಡ-ಮರಗಳನ್ನು ಬೆಳೆಸುವುದು ಮತ್ತು ಹವಾಮಾನ ಬದಲಾವಣೆ ವಿರುದ್ಧ ಜಾಗೃತಿ ಮೂಡಿಸುವುದು. ಏಕೆ ಆಚರಿಸಬೇಕು ಎಂದರೆ ಗಾಳಿ, ನೀರು ಮತ್ತು ಆಹಾರಕ್ಕಾಗಿ ನಾವು ಸಂಪೂರ್ಣವಾಗಿ ಪರಿಸರವನ್ನು ಅವಲಂಬಿಸಿದ್ದೇವೆ. ಇದರ ಮಹತ್ವ ನೋಡಿದಾಗ ದುರಾಸೆಗೆ ಕಡಿವಾಣ. ಆಧುನಿಕ ಬದುಕಿನಿಂದ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಲು ಇದು ನೆನಪಿಸುತ್ತದೆ. ಕರ್ನಾಟಕದ ಹೆಮ್ಮೆ ಸಾಲುಮರದ ತಿಮ್ಮಕ್ಕನವರು ನೂರಾರು ಆಲದ ಮರಗಳನ್ನು ಮಕ್ಕಳಂತೆ ಬೆಳೆಸಿ ಇಡೀ ಜಗತ್ತಿಗೆ ಪರಿಸರ ಕಾಳಜಿಯ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಆಲಹಳ್ಳಿ, ಐಇಸಿ ಸಂಯೋಜಕರಾದ ಭೀಮರಾಯ ಚೌಧರಿ, ಬಿಲ್ ಕಲೆಕ್ಟರ್ ಪ್ರಕಾಶ್, ಡಿಇಒ ಭಾರತಿ ಮತ್ತು ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.



