ಪ್ರಜಾಸ್ತ್ರ ಸುದ್ದಿ
ಉತ್ತರ ಕನ್ನಡ(Uttara Kannada): ಹಳಿಯಾಳದಲ್ಲಿ ನಡೆದ ರೌಡಿಯೊಬ್ಬನ ದೌರ್ಜನ್ಯ ಪ್ರಕರಣದಲ್ಲಿ ಕರ್ತವ್ಯಲೋಪದ ಹೆಸರಿನಲ್ಲಿ ಪಿಎಸ್ಐ ಬಸವರಾಜ ಮಬನೂರ ಅವರನ್ನು ಅಮಾನತುಗೊಳಿಸಲಾಗಿದೆ. ಇಲ್ಲಿ ತನಿಖಾಧಿಕಾರಿ ಸಿಪಿಐ ಅವರಿದ್ದು, ಅವರನ್ನು ಬಿಟ್ಟು ಪಿಎಸ್ಐ ಅಮಾನತು ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಘಟನೆ ನಡೆದ ನಾಲ್ಕೈದು ದಿನವಾದರೂ ಪೊಲೀಸರ ಮೇಲೆಯೇ ದೌರ್ಜನ್ಯ ನಡೆಸಿದ ರೌಡಿಯನ್ನು ವಶಕ್ಕೆ ಪಡೆಯುವ ಬದಲು, ಸಿಪಿಐ ಜೈಪಾಲ್ ಪಾಟೀಲ ಸ್ಥಳದಿಂದ ಹೊರಟು ಬಿಡಿ ಎಂದು ಪಿಎಸ್ಐಗೆ ಮೌಖಿಕ ಆದೇಶ ನೀಡಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಮಾಹಿತಿ ನೀಡಿದರೂ ಕೂಗಳತೆ ದೂರದಲ್ಲಿರುವ ಸಿಪಿಐ ಕಚೇರಿಯಿಂದ ಜೈಪಾಲ್ ಪಾಟೀಲ ಅವರು ಬಂದಿಲ್ಲವಂತೆ. ರೌಡಿಯನ್ನು ಮುಟ್ಟಬೇಡ. ಸುಮ್ಮನೆ ಸಮಸ್ಯೆಯಾಗುತ್ತದೆ. ಅಲ್ಲಿಂದ ಹೊರಟು ಬಿಡಿ ಎಂದಿದ್ದಾರಂತೆ. ಪೊಲೀಸರ ಮೇಲೆ ದೌರ್ಜನ್ಯವೆಸಗಿದ ರೌಡಿ ವಶಕ್ಕೆ ಪಡೆಯಬೇಕಾದ ತನಿಖಾಧಿಕಾರಿ ಸಿಪಿಐ, ಡಿವೈಎಸ್ಪಿ ಅವರ ಗಮನಕ್ಕೂ ತಂದರೂ ಕ್ರಮ ತೆಗೆದುಕೊಳ್ಳದೆ ಪಿಎಸ್ಐ ಅವರನ್ನು ಅಮಾನತು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.



