ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತಾವು ಅಂದುಕೊಂಡಂತೆ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಒಬ್ಬರು ಡಿಸಿಎಂ, 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲ ಸಚಿವ ಸಂಪುಟದಲ್ಲಿ ಮಹಿಳೆಗೆ ಅವಕಾಶ ಸಿಕ್ಕಿಲ್ಲ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಕೊಕ್ ಕೊಟ್ಟಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಸಿಗುತ್ತಾ ಕಾದು ನೋಡಬೇಕು.
ಯು.ಟಿ ಖಾದರ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿ ಉಳಿದ 10 ಸಚಿವರು ಸಿದ್ದರಾಮಯ್ಯ ಸಂಪುಟದಲ್ಲಿದ್ದವರು. ಪರಮೇಶ್ವರ ಡಿಸಿಎಂ ಆಗಿದ್ದಾರೆ. ಎಂ.ಬಿ ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಕೃಷ್ಣಬೈರೇಗೌಡ, ಕೆ.ಹೆಚ್.ಮುನಿಯಪ್ಪ, ಕೆ.ಜೆ ಜಾರ್ಜ್, ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈಗ ಇವರಿಗೆಲ್ಲ ಯಾವ ಖಾತೆ ಕೊಡುತ್ತಾರೆ ಅನ್ನೋದರ ಚರ್ಚೆ ಶುರುವಾಗಿದೆ. ಈ ಹಿಂದೆ ನಿಭಾಯಿಸಿದ್ದ ಖಾತೆಗಳನ್ನೇ ಮುಂದುವರೆಸಲಾಗುತ್ತಾ, ಹೊಸ ಖಾತೆಗಳನ್ನು ನೀಡಲಾಗುತ್ತಾ, ನಾಯಕರು ಇಂತಹದ್ದೆ ಖಾತೆ ಬೇಕು ಎಂದು ಬೇಡಿಕೆ ಏನಾದರೂ ಇಟ್ಟಿದ್ದಾರ ಎಂಬ ಪ್ರಶ್ನೆಗಳಿವೆ. ಯಾಕಂದರೆ, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಆಗ ಬರುವ ಸಚಿವರಿಗೆ ಖಾತೆ ಹಂಚಿಕೆ ಮಾಡಬೇಕಾದ ವಿಚಾರವೂ ಗಮನದಲ್ಲಿರಬೇಕಿದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗುತ್ತೆ ಅನ್ನೋ ಲೆಕ್ಕಾಚಾರ ಜೋರಾಗಿದೆ.



