LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಎಲ್ಲರ ಕಣ್ಮನ ಸೆಳೆಯುವ ಫಲಪುಷ್ಪ ಪ್ರದರ್ಶನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಇವರ ಸಹಯೋಗದೊಂದಿಗೆ ಜನವರಿ 13ರಿಂದ 15ರವರೆಗೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ಬಸವವನ ಆವರಣದಲ್ಲಿ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿ, ಎಲ್ಲ ಮಳಿಗೆಗಳನ್ನು ವೀಕ್ಷಣೆ ಮಾಡಿದರು.

ಫಲಪುಸ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿವೆ. ವಿವಿಧ ಹೂ-ಹಣ್ಣು ಹಾಗೂ ತರಕಾರಿಗಳಿಂದ ನಿರ್ಮಿಸಲಾದ ಅಪರೂಪದ ಕಲಾಕೃತಿಗಳು ಜನಾಕರ್ಷಣೆಯವಾಗಿವೆ. ಒಂದಕ್ಕಿಂತ ಒಂದು ವಿಭಿನ್ನ ಆಲೋಚನೆ, ಸೃಜನಶೀಲತೆ ಹಾಗೂ ನೈಸರ್ಗಿಕ ಸೌಂದರ್ಯವನ್ನು ಸೃಷ್ಟಿಸುವ ಸನ್ನಿವೇಶ ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದೆ. ಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ ಗೋಲಗುಮ್ಮಟ, ಗಿಡದಲ್ಲಿ ಕುಳಿತ ನಾಟ್ಯ ಮಯೂರಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಹೂವಿನಲ್ಲಿ ಮೂಡಿಬಂದ ಡಾಲ್ಫಿನ್, ಪುಷ್ಪ ಮಾರಾಟಕ್ಕೆ ಬಂದ ಪುಷ್ಪಲತಾ ಚಿತ್ರ, ನೀರಿನಿಂದ ಹೊರಬಂದ ಹಂಸ ಸೇರಿದಂತೆ ಮುಂತಾದ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ ಭೌಗೋಳಿಕ ಮಾನ್ಯತೆ ಪಡೆದ ಇಂಡಿ ಲಿಂಬೆ, ವಿವಿಧ ಬಗೆಯ ಹೂಗಳಿಂದ ನಿರ್ಮಾಣವಾದ ಕಲಾ ಕೃತಿಗಳು, ಆರೋಗ್ಯ ಸಂದೇಶವನ್ನು ಸಾರುವ ಹಣ್ಣುಗಳ ಕಲಾಕೃತಿ, ತರಕಾರಿಯಲ್ಲಿ ಸೃಷ್ಟಿಸಿದ ಮಹಾಪುರುಷರ ಆಕೃತಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಸಿಂಪಿಯಲ್ಲಿ ಅರಳಿದ ಹಣ್ಣು, ಹೂವಿನಲ್ಲಿ ಅರಳಿದ ಅಳಿಲು, ಹಸಿ ಈರುಳ್ಳಿಯಲ್ಲಿ ಉದ್ಭವಿಸಿದ ತೋಟದ ಮನೆ, ಕಲಾಕೃತಿಗಳು ಕಲಾವಿದರ ವೈವಿಧ್ಯಮಯ ಕಲ್ಪನೆಗೆ ಸಾಕ್ಷಿಕರಿಸಿವೆ. ಧಾನ್ಯಬೀಜಗಳಿಂದ ನಿರ್ಮಿಸಿದ ಕಲಾ ಕೃತಿಗಳಲ್ಲಿ ಸಿರಿಧಾನ್ಯದಲ್ಲಿ ಮೂಡಿಬಂದ ಸ್ವಾಮಿವಿವೇಕಾನಂದರು, ರಾಜಗಿರಿ ಬೀಜಗಳಿಂದ ಮೂಡಿಬಂದ ಜಾಂಬವಂತ ಆಕರ್ಷಣೀಯವಾಗಿವೆ.



ಶಾಲಾ ಮಕ್ಕಳಿಗೆ ತೋಟಗಾರಿಕೆ ವಿಷಯಗಳ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಜಿಲ್ಲೆಯ ರೈತರು ಬೆಳೆದ ಎಲ್ಲ ಬಗೆಯ ಹಣ್ಣು, ತರಕಾರಿ ಹಾಗೂ ಪುಷ್ಪಗಳ ಪ್ರದರ್ಶನ ಏರ್ಪಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ, ನಾಗರಿಕರಿಗೆ, ಗೃಹಿಣಿಯರಿಗೆ ಬೋನ್ಸಾಯ ಗಿಡಗಳ ಬೇಸಾಯ, ಅಣಬೆ ಬೇಸಾಯ, ಕೈತೋಟ, ಸಾವಯವ ಕೃಷಿಗೆ ಉತ್ತೇಜನ ನೀಡಲು ಪ್ರದರ್ಶಿಸಲಾಗಿದೆ. ರೈತರಿಗೆ ಮಾಹಿತಿ ನೀಡಲು ತೋಟಗಾರಿಕೆ ಸೇವಾ ಕೇಂದ್ರ, ವಿವಿಧ ಯಂತ್ರೋಪಕರಣ, ಹನಿ ನೀರಾವರಿ ಉಪಕರಣಗಳು ಹಾಗೂ ಇತರ ಪರಿಕರ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ದ್ರಾಕ್ಷಿ, ದಾಳಿಂಬೆ ಮತ್ತು ಡ್ರ್ಯಾಗನ್ ಫ್ರೂಟ್ ಬೆಳೆಗಳಲ್ಲಿ ಹವಾಮಾನ ಅಧಾರಿತ ಸಮಗ್ರ ಬೇಸಾಯ ಪದ್ಧತಿ, ಜೇನು ಸಾಕಾಣಿಕೆ ತರಬೇತಿ ಹಾಗೂ ತಾಳೆ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಈ ಪ್ರದರ್ಶನದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಂಕ್ರಾಂತಿ ಹಬ್ಬಕ್ಕೆ ಬೇಕಾಗುವ ಹಣ್ಣು ಹಂಪಲುಗಳನ್ನು ರೈತರಿಂದ ನೇರವಾಗಿ ಸಾರ್ವಜನಿಕರಿಗೆ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಸಂಜೆ ವಿವಿಧ ಕಲಾ ತಂಡ, ಶಾಲಾ ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂಜಾನೆ 9.30 ರಿಂದ ಸಂಜೆ 8.30ರವರೆಗೆ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಪರೂಪದ ಪ್ರದರ್ಶನದಲ್ಲಿ ಭಾಗವಹಿಸಿ ವೀಕ್ಷಣೆ ಮಾಡುವಂತೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಹುಲ ಭಾವಿದೊಡ್ಡಿ ಮನವಿ ಮಾಡಿಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST