ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಗಳಿಗಾಗಿ ನೇಮಕಗೊಂಡಿರುವ ವಿಶೇಷ ಅಧಿಕಾರಿಗಳಾದ ಡಾ.ರಾಜಶೇಖರ ದ್ಯಾಬೇರಿ ಅವರು ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಾವಳಿಗಳನ್ವಯ ಕಾಲೇಜು ಸ್ಥಾಪನೆಗೆ ಅಗತ್ಯ ಭೂಮಿ, ಕಟ್ಟಡ, ಬೋಧನಾ ಆಸ್ಪತ್ರೆ ಹಾಗೂ ಇತರೆ ಶಾಸನಬದ್ಧ ಅವಶ್ಯಕತೆಗಳು ಸೇರಿದಂತೆ ಮಹತ್ವದ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ವಿವಿಧ ಹಳೆಯ ಕಟ್ಟಡಗಳು ಹಾಗೂ ಪ್ರಗತಿಯಲ್ಲಿರುವ ಹೊಸ ಕಟ್ಟಡ ಕಾಮಗಾರಿಗಳನ್ನು ವಿಶೇಷ ಅಧಿಕಾರಿಗಳು ಖುದ್ದಾಗಿ ವೀಕ್ಷಿಸಿ, ಲಭ್ಯವಿರುವ ಮೂಲಸೌಕರ್ಯಗಳ ಪರಿಶೀಲಿಸಿದರು. ಬಳಿಕ ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ, ವೈದ್ಯಕೀಯ ಕಾಲೇಜಿಗೆ ಅತ್ಯಗತ್ಯವಾಗಿ ಬೇಕಾಗುವ ಮಾನವ ಸಂಪನ್ಮೂಲಗಳ ವಿವರಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ ಮತ್ತು ಡಿಎನ್‌ಬಿ (ಡಿಎನ್‌ಬಿ) ಕೋರ್ಸ್ಗಳಿಗೆ ಸಂಬAಧಿಸಿದ ಸಮಗ್ರ ಮಾಹಿತಿ ಪಡೆದುಕೊಂಡರು.
ಜಿಲ್ಲಾಸ್ಪತ್ರೆಯಡಿ ಕಾರ್ಯನಿರ್ವಹಿಸುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್), ಸೂಪರ್ ಸ್ಪೆಶಾಲಿಟಿ ವಿಭಾಗ ಹಾಗೂ ಟ್ರಾಮಾ ಕೇರ್ ಕೇಂದ್ರಗಳ ವೈದ್ಯಕೀಯ ವ್ಯವಸ್ಥೆ ಮತ್ತು ಅಲ್ಲಿ ಮಂಜೂರಾಗಿರುವ ಸಿಬ್ಬಂದಿ ವರ್ಗದ ಕುರಿತು ವಿವರವಾದ ಚರ್ಚೆ ನಡೆಸಿದರು. ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ, ಹಿರಿಯ ಅರವಳಿಕೆ ಶಾಸ್ತ್ರಜ್ಞರಾದ ಡಾ.ಸಂದೀಪ ಎಸ್. ಸಜ್ಜನ, ಹಿರಿಯ ತಜ್ಞ ವೈದ್ಯರಾದ ಡಾ.ಹರೀಶ ಪೂಜಾರಿ, ಡಾ.ರಾಜಕುಮಾರ ಹಿರೇಮಠ, ಡಾ.ಸಿದ್ದಗೊಂಡಪ್ಪ ಹಾವಿನಾಳ, ಸಹಾಯಕ ಅಭಿಯಂತರರಾದ ಮಹೇಶ ಆರ್.ಜಾಧವ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಎ.ಎ.ಸಿಂದಗಿಕರ ಸೇರಿದಂತೆ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



