ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿಜಯಪುರ-ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯ ಹತ್ತಿರದ ಗೊಳಸಂಗಿ ಗ್ರಾಮದ ಹತ್ತಿರ ಇರುವ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣ ಸೆಪ್ಟೆಂಬರ್ 2ರ ರಾತ್ರಿ ನಡೆದಿತ್ತು. 19 ಲಕ್ಷದ 29 ಸಾವಿರ ರೂಪಾಯಿ ಇರುವ ಎಟಿಎಂ ಕ್ಯಾಸೆಟ್ ಸಮೇತ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿರುವ ಅವರು, ಹರಿಯಾಣದ ಪಾಲವಾಲ್ ಜಿಲ್ಲೆಯ ಧಿರಂಕಿಯ ಸಾಹಿಲ್ ಮೆಹಮೂದ್(24), ಉತ್ತರ ಪ್ರದೇಶದ ಲೌಟಿ ಥಾಣಾ ಮುಂಡಾಳಿಯ ಮೀರ್ ತಾಲೂಕಿನ ಕಮರಿಯಾಬ್ ಸತ್ತಾರ್(50), ಉತ್ತರ ಪ್ರದೇಶದ ಮಿರತ್ ಜಿಲ್ಲೆಯ ಬಿಝೋಲಿಯ ಆಕಾಶ ಪ್ರದೀಪ ತ್ಯಾಗಿ ಬಂಧಿತರು. ಇನ್ನು ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಾನ್ವಾಯ್ ಪೊಲೀಸ್ ಠಾಣೆ ಪೊಲೀಸರು ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಘಾಟಾ-ನಗದಾ-ನಿಮಾಚ ಟೋಲ್ ನಾಕಾದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಸಂಶಯುಕ್ತ ವಾಹನ ಹಾಗೂ ಅದರಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಜಯಪುರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸರು ಮೊದಲೇ ಮಾಹಿತಿ ನೀಡಿದ್ದರು. ತನಿಖಾ ತಂಡ ಮಧ್ಯಪ್ರದೇಶದ ಕಾನ್ವಾಯ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದಾರೆ.
ಬಂಧಿತರಿಂದ 3 ಲಕ್ಷದ 60 ಸಾವಿರ ರೂಪಾಯಿ ನಗದು, ಸ್ಕಾರ್ಪಿಯೋ ವಾಹನ ಹಾಗೂ ಕಳ್ಳತನಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದು, ತನಿಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.


