ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಖಾತೆ ವಿಚಾರವಾಗಿ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಅವರ ಮನವೊಲಿಸುವ ಕೆಲಸ ಶುಕ್ರವಾರ ತಡರಾತ್ರಿಯವರೆಗೂ ನಡೆದಿದೆ. ಈ ಬಗ್ಗೆ ಖಾಸಗಿ ಹೋಟೆಲ್ ಹತ್ತಿರ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್, ನಮ್ಮ ಕುಟುಂಬದ ಸಮಸ್ಯೆ ನಾವು ಬಗೆ ಹರಿಸಿಕೊಳ್ಳುತ್ತೇವೆ. ನಾವೆಲ್ಲ ಸ್ನೇಹಿತರು, ನಾನು ಅಧ್ಯಕ್ಷನಾಗಿದ್ದಾಗ, ಅವರು ಕಾರ್ಯಾಧ್ಯಕ್ಷರಾಗಿದ್ದರು. ನಾನು ಸಿಎಂ ಆಗಿದ್ದು ಅವರು ಸಚಿವರಾಗಿದ್ದಾರೆ ಎಂದರು.
ಅದೇ ಖಾತೆಯಲ್ಲಿಯೇ ಮುಂದುವರೆಯುತ್ತಾರೆಯೇ ಅನ್ನೋ ಪ್ರಶ್ನೆಗೆ, ಖಾತೆ ವಿಚಾರವಾಗಿ ನಾವು ಏನು ಮಾತನಾಡಿದ್ದೇವೆ. ಬೇರೆ ಯಾವ ವಿಚಾರ ಮಾತನಾಡಿದ್ದೇವೆ. ಏನು ತಿಂದಿದ್ದೇವೆ ಎಂದೆಲ್ಲ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ ಅಂತಾ ಕೇಳಿದರು. ಇದೆಲ್ಲ ಆಗುವುದು ಸಹಜ. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ ಅಂತಾ ಹೇಳಿದರು.



