ಪ್ರಜಾಸ್ತ್ರ ಸುದ್ದಿ
ಗ್ವಾಲಿಯಾರ್(Gwalior): ನವರಾತ್ರಿ ಸಂಭ್ರಮದಲ್ಲಿದ್ದ ಜನರಲ್ಲಿ ಸಂತೋಷವನ್ನು ಯಮರೂಪಿ ಟ್ರಕ್ ವೊಂದು ಕಿತ್ತುಕೊಂಡಿದೆ. ದೇವಾಲಯದ ಹೊರಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ನಡುವೆ ಟ್ರಕ್ ವೊಂದು ನುಗ್ಗಿದ ಪರಿಣಾಮ 15 ಜನರು ಮೃತಪಟ್ಟಿದ್ದು, 40 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯಾರ್ ನಲ್ಲಿ ನಡೆದಿದೆ.
ಶನಿವಾರ ಮಧ್ಯರಾತ್ರಿ ಸುಮಾರು 1.30ರ ವೇಳೆಯಲ್ಲಿ ನಡೆದಿದೆ. ಭತ್ತ ತುಂಬಿಕೊಂಡು ಬರುತ್ತಿದ್ದ ಟ್ರಕ್, ಚಿನಾರ್ ರಸ್ತೆಯಲ್ಲಿರುವ ದೇವಾಲಯದ ಹೊರಗೆ ನಿಂತಿದ್ದ ಭಕ್ತರು ಹಾಗೂ ಅಂಗಡಿಗೆ ಡಿಕ್ಕಿ ಹೊಡೆದು ಇಂತಹದೊಂದು ಅನಾಹುತ ಸೃಷ್ಟಿಸಿದೆ. ಪಂಜಾಬ್ ನೋಂದಣಿಯ ಟ್ರಕ್ ಇದಾಗಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.


