ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿ ಮುಖಂಡರು ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿಗೆ ಆಗ್ರಹಿಸಿ ಇಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು. ಭಾರತ ಸಂವಿಧಾನದ 371(ಜೆ ) ಗೆ ತಿದ್ದುಪಡಿ ಮಾಡಿ ಮೀಸಲಾತಿಯಿಂದ ಬಿಟ್ಟುಹೋದ ವಿಜಯಪುರ ಜಿಲ್ಲೆ ಸೇರಿಸಲು ಮುಖ್ಯಮಂತ್ರಿಗಳ ಮನ ಒಲಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಬೇಕು ಹಾಗೂ ಮೀಸಲಾತಿಗೆ ಸೇರ್ಪಡೆಯಾಗುವವರೆಗೆ ತಾತ್ಕಾಲಿಕವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸೌಲಭ್ಯಗಳನ್ನು ವಿಜಯಪುರ ಜಿಲ್ಲೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಯುವಕರಿಗೆ ನೇಮಕಾತಿಯಲ್ಲಿ ಮೀಸಲಾತಿ,ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುವ ವಿಶೇಷ ಅನುದಾನ ಸೌಲಭ್ಯ ಸೇರಿದಂತೆ ಜಿಲ್ಲೆಯ 25 ಲಕ್ಷ ಜನರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 371(ಜೆ) ತಿದ್ದುಪಡಿ ಮಾಡಿ ವಿಜಯಪುರ ಜಿಲ್ಲೆಯನ್ನು ಮೀಸಲಾತಿಯಡಿ ಸೇರಿಸಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕೆಂದು ಹೋರಾಟಗಾರರು ಇದೆ ಸಂದರ್ಭದಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕರು ಹೋರಾಟ ಸಮಿತಿ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೋರಾಟ ಸಮಿತಿ ಹಾಗೂ ಜಿಲ್ಲೆಯ ಜನರ ನ್ಯಾಯಯುತ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲೆಗೆ 371(ಜೆ) ಮೀಸಲಾತಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ವಂಶಸ್ಥ ರಂಗರಾವ ಖೇಡಗಿಕರ, ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿಯ ಮುಖಂಡರಾದ ವಿನೋದ ಖೇಡ, ಸಿದ್ದನಗೌಡ ಪಾಟೀಲ, ಎನ್.ಸುರೇಶಕುಮಾರ, ಲಾಯಪ್ಪ ಇಂಗಳೆ, ಅನಿಲ ಇಕ್ಕಡೆ, ಮಹಾದೇವಪ್ಪ ತೇಲಿ, ಸಾಗರ ಸಾವಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


