ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಭಾರತ ಸೇವಾದಳ ಶಿಸ್ತು, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯಾಗಿದೆ. ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಕುರಿತು ಮುಖ್ಯ ಗುರುಗಳಿಗೆ, ಸಿಆರ್ ಪಿ, ಬಿಆರ್ ಪಿಗಳಿಗೆ ಸಧ್ಯದಲ್ಲೇ ಆಯೋಜನೆ ಮಾಡಿಕೊಳ್ಳಲಾಗವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಸ್.ಆಲಗೂರ ಹೇಳಿದರು. ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ತಾಲೂಕು ಸಮಿತಿ ಸಿಂದಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ ಇವರುಗಳ ಸಹಯೋಗದಲ್ಲಿ ಶುಕ್ರವಾರದಂದು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಸಿಂದಗಿ ತಾಲ್ಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕರ ಪುನಃಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ ಮಾತನಾಡಿ, ನಾವು ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ಗೌರವ ಗಳಿಸಲು ಮತ್ತು ಗುರುತಿಸಿಕೊಳ್ಳಲು ಸಾದ್ಯ. ಈ ನಿಟ್ಟಿನಲ್ಲಿ ಭಾರತ ಸೇವಾದಳ ಮುಖಾಂತರ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವನೆಯ ವಿಚಾರಧಾರೆಗಳನ್ನು ಮೂಡಿಸಬೇಕು ಎಂದರು. ಸೇವಾದಳ ಸಮಿತಿ ಮಹಿಳಾ ಸದಸ್ಯೆ ಶ್ಯಾಮಲಾ ಮಂದೇವಾಲಿ ಮಾತನಾಡಿ, ಇಂದಿನ ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದು ಆದ್ದರಿಂದ ಮಕ್ಕಳಲ್ಲಿ, ಯುವಜನರಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿ ಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ ಬಿರಾದಾರ, ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಎಸ್.ಡಿ.ಕುಂಬಾರ, ತಾಲೂಕು ಸಮಿತಿ ಸದಸ್ಯ ಬಸವರಾಜ ಲಿಂಗದಳ್ಳಿ, ಶಿಕ್ಷಕ ಮಹಿಳಾ ಪ್ರತಿನಿಧಿ ಎಸ್.ಎಸ್.ಕುಂಬಾರ, ಶಾಲಾ ಮುಖ್ಯ ಶಿಕ್ಷಕ ಮಹಾದೇವ ಬಿರಾದಾರ ಸೇರಿ ಇತರರು ಉಪಸ್ಥಿತರಿದ್ದರು. ಭಾರತ ಸೇವಾದಳದ ವಲಯ ಸಂಘಟಿಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಘಟಕ ಡಿ.ಸಿ.ಜಾಧವ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಆರ್.ಆರ್.ನಿಂಬಾಳ್ಕರ್ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಮಲ್ಲೇದ ವಂದಿಸಿದರು.



