ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ನಿತ್ಯ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಈ ವೇಳೆ ಮಾತನಾಡಿರುವ ಅವರು, ನಾನು ಜುಲೈ 20ರ ತನಕ ಬದುಕಿರುತ್ತೇನೆ. ಹೊರಗಿನಿಂದ ಬಲಹೀನನಂತೆ ಕಾಣಬಹುದು. ಒಳಗೆ ತುಂಬಾ ಗಟ್ಟಿಯಾಗಿದ್ದೇನೆ. ಜುಲೈ 20ರಂದು ಸಂಸತ್ ಭವನದವರೆಗೂ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತೇವೆ. ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ಬೇಡಿಕೆ ಇಡುತ್ತೇವೆ. ನೀವೆಲ್ಲ ಬಾರದೆ ಪ್ರತಿಭಟನೆ ಯಶಸ್ವಿಯಾಗದಿದ್ದರೆ ನಾನು ದೆವ್ವವಾಗಿ ಬಂದು ಕಾಡುತ್ತೇನೆ ಎಂದು ಹಾಸ್ಯ ಮಾಡಿದ್ದಾರೆ.
ಇನ್ನೊಂದು ಕಡೆ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಎಐಎಸ್ಎ ಸಂಘಟನೆಯ ವಿದ್ಯಾರ್ಥಿಗಳು ಸಹ ಸತ್ಯಾಗ್ರಹ ನಡೆಸಿದ್ದು, 28ನೇ ದಿನಕ್ಕೆ ಕಾಲಿಟ್ಟಿದೆ. ನೇಹಾ, ಮನೀಶ್, ಅಮಿನ್ ಅನ್ನೋ ವಿದ್ಯಾರ್ಥಿಗಳ ಆರೋಗ್ಯ ಸಹ ಹದಗೆಟ್ಟಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ನೀಟ್ ಅಕ್ರಮದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅನ್ನೋ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.



