ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಪ್ರದೂಷ್ ರಾವ್ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೆ ನೂರರಷ್ಟು ಸತ್ಯ ಹೇಳುತ್ತೇನೆ ಎಂದು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾಮ್ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ.
ಅರ್ಜಿಯನ್ನು ಓದಿ ಸಹಿ ಮಾಡಿದ್ದೀರಾ? ಅದರಲ್ಲಿ ಏನು ಬರೆದಿದೆ ಎಂದು ತಿಳಿದಿದೆಯೇ? ಅರ್ಜಿ ಸಲ್ಲಿಸಲು ಯಾರಾದರೂ ಒತ್ತಡ ಹೇರಿದರಾ ಎಂದು ನ್ಯಾಯಾಧೀಶರ ಕೇಳಿದರು. ಅದಕ್ಕೆ ಆರೋಪಿ ಪ್ರದೂಷ್, ಸಂಪೂರ್ಣವಾಗಿ ಓದಿ ಸಹಿ ಮಾಡಿದ್ದೇನೆ. ಕೊಲೆ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ಸ್ವಯಂ ಪ್ರೇರಣೆಯಿಂದ ಬರೆದಿದ್ದೇನೆ. ಯಾರ ಒತ್ತಡವೂ ಇಲ್ಲ ಎಂದಿದ್ದಾನೆ.
ಹೇಳಿಕೆ ದಾಖಲಿಸಿಕೊಂಡ ಕೋರ್ಟ್ ಆರೋಪಿ ಪಾತ್ರದ ಕುರಿತು ವರದಿ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿತು. ಈ ಕುರಿತು ಆಗಸ್ಟ್ 24ರಂದು ಅಂತಿಮ ಆದೇಶ ಹೊರಡಿಸುವುದಾಗಿ ತಿಳಿಸಿತು.



