ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಭಾರತದ ಖ್ಯಾತ ಗಾಯಕಿ, ಗಾನ ಕೋಗಿಲೆ ಎಸ್.ಜಾನಕಿ ಅವರು ಶನಿವಾರ ಸಂಜೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಭಾನುವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು, ಸಿನಿಮಾ ರಂಗದ ಗಣ್ಯರು ಅಂತಿಮ ದರ್ಶನ ಪಡೆದರು.
ಮುಂಜಾನೆ ಶಾಸಕ ಜಿ.ಟಿ ದೇವೇಗೌಡ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸೊಸೆ, ಮೊಮ್ಮಗಳು ಸೇರಿದಂತೆ ಕುಟುಂಬಸ್ಥರು ಪೂಜೆ ನೆರವೇರಿಸಿದ ನಂತರ ಮಹಾರಾಜ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀತ ತೆಗೆದುಕೊಂಡು ಬರಲಾಯಿತು. ಸಾಕಷ್ಟು ಪೊಲೀಸ್ ಬಂದೋಬಸ್ತಿ ಮೂಲಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು.
ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಸೇರಿದಂತೆ ಇತರೆ ರಾಜ್ಯಗಳ ಸಿನಿಮಾ ಕ್ಷೇತ್ರದ ಗಣ್ಯರು, ಕಲಾವಿದರು, ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕೀಯ ನಾಯಕರು, ಅವರ ಹಿತೈಷಿಗಳು ಆಗಮಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಕೇರಳಂ ಸರ್ಕಾರದ ಪರವಾಗಿ ರೋಜಿ.ಎಂ.ಜಾನ್ ಅವರು ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಸುಮಾರು 3.10ಕ್ಕೆ ಕಣಿಯನಹುಂಡಿಯತ್ತ ಅಂತಿಮಯಾತ್ರೆ ಸಾಗಿತು. ಎಸ್.ಜಾನಕಿ ಅವರ ಆಸೆಯಂತೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.



