ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರಾವಳಿ ಸಿನಿಮಾದ ಡಬ್ಬಿಂಗ್ ಹಾಗೂ ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಜ್ವಲ್ ದೇವರಾಜ್ ವಿರುದ್ಧ ಸಿನಿಮಾ ನಿರ್ಮಾಣ ಸಂಸ್ಥೆಯಾದ ಗುರುದತ್ತ ಗಾಣಿಗ ಫಿಲ್ಮ್ಸ್ ಜುಲೈ 10ರಂದು ಅಧಿಕೃತ ಹೇಳಿಕೆಯ ಮೂಲಕ ಕೆಲ ಆರೋಪಗಳನ್ನು ಮಾಡಿದೆ. ಇದಕ್ಕೆ ನಟ ಪ್ರಜ್ವಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪತ್ರದ ಮೂಲಕ ಅದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕರಾವಳಿ ಚಿತ್ರದ ನಿರ್ಮಾಣ ಸಂಸ್ಥೆ ಗುರುದತ್ತ ಗಾಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ತ ಗಾಣಿಗ ಅವರಿಂದ ಸಾರ್ವಜನಿಕವಾಗಿ ನೀಡಲಾಗುತ್ತಿರುವ ಹೇಳಿಕೆಗಳ ಹಿನ್ನಲೆಯಲ್ಲಿ ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳ ಮುಂದೆ ಕೆಲವು ವಾಸ್ತುವಾಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನಾನು ಭಾವಿಸಿದ್ದೇನೆ.
ಕರಾವಳಿ ಚಿತ್ರದ ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿ ನನ್ನಿಂದ ಯಾವುದೇ ಮಾಹಿತಿ, ಅನುಮತಿ ಅಥವ ಒಪ್ಪಿಗೆಯಿಲ್ಲದೆ ನನ್ನ ಪಾತ್ರದ ಧ್ವನಿಗೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ ನನಗೆ ಒಪ್ಪಿಗೆಯಾದ ಸಂಭಾನವೆಯೂ ಪೂರ್ತಿಯಾಗಿ ಪಾವತಿಯಾಗಿರಲಿಲ್ಲ. ಈ ಎರಡು ಕಾರಣಗಳಿಂದಲೇ ನಾನು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ನಂತರ ಗುರುದತ್ತ ಗಾಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ತ ಗಾಣಿಗ ಅವರು ಈ ವಿವಾದಕ್ಕೆ ಸಿಕ್ಸ್ ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ. ಆ ಕುರಿತು ನಾನು ಸ್ಪಷ್ಟಪಡಿಸಲು ಬಯಸುವುದು ಏನಂದರೆ, ಈ ವಿಷಯಕ್ಕೆ ಹಾಗೂ ಸಿಕ್ಸ್ ಪ್ಯಾಕ್ ಮಾಡದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಯಾವುದೆ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿರುವುದು ಹಾಗೂ ಆ ಸಂದರ್ಭದಲ್ಲಿ ನನ್ನ ಸಂಭಾವನೆ ಪೂರ್ತಿಯಾಗಿ ಪಾವತಿಯಾಗದಿರುವುದೆ ವಿಷಯದ ಮೂಲ ಕಾರಣಗಳಾಗಿವೆ. ಮೊದಲ ದಿನದಿಂದ ನನ್ನ ನಿಲುವು ಒಂದೆಯಾಗಿತ್ತು. ನನಗೆ ಬಾಕಿ ಇದ್ದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ ಚಿತ್ರದ ಡಬ್ಬಿಂಗ್ ಪೂರ್ಣಿಗೊಳಿಸಲು ಹಾಗೂ ಚಿತ್ರದ ಪ್ರಚಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಾನು ಸಿದ್ದನಿದ್ದೇನೆ ಎಂದು ಸ್ಪಷ್ಟಪಡಿಸಿದ್ದೆ.
ಟ್ರೇಲರ್ ಬಿಡುಗಡೆಯಾದ ಮರುದಿನ ಜಿಎಸ್ ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಅದರ ನಂತರ ಗುರುದತ್ತ ಗಾಣಿಗ ಫಿಲ್ಮ್ಸ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನನ್ನ ಭಾಗವಹಿಸುವಿಕೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ ಚಿತ್ರದ ಡಬ್ಬಿಂಗ್ ಹಾಗೂ ಪ್ರಚಾರದಲ್ಲಿ ನಾನು ಭಾಗವಹಿಸದಿರುವುದು ನನ್ನ ನಿರ್ಧಾರವಲ್ಲ ಎಂಬುವುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಅಂತಾ ಹೇಳಿದ್ದಾರೆ. ಹೀಗೆ ಸಾಕಷ್ಟು ಸುದೀರ್ಘವಾದ ಬರಹದ ಮೂಲಕ ಹಲವು ವಿಚಾರಗಳನ್ನು ನಟ ಪ್ರಜ್ವಲ್ ದೇವರಾಜ್ ಹಂಚಿಕೊಂಡಿದ್ದಾರೆ.



