ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ತೀವ್ರ ಮಳೆ ಅಭಾವದಿಂದಾಗಿ ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು, ಭಾನುವಾರ ಜಿಲ್ಲೆಯಾದ್ಯಂತ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಹಾನಿಗೀಡಾದ ಬೆಳೆಗಳನ್ನು ಪರಿಶೀಲಿಸಿ, ಸಂಕಷ್ಟದಲ್ಲಿರುವ ರೈತರ ಪರ ನಮ್ಮ ಸರ್ಕಾರವಿದೆ ಎಂದು ಭರವಸೆ ನೀಡಿದರು.
ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರೈತ ಮಾಳಪ್ಪ ಸೊನಕನಹಳ್ಳಿ ಅವರ 6 ಎಕರೆ ಜಮೀನಿನಲ್ಲಿ ಒಣಗುತ್ತಿರುವ ತೊಗರಿ ಬೆಳೆಯನ್ನು ಸಚಿವರು ವೀಕ್ಷಿಸಿದರು. ಈ ವೇಳೆ ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ನಮ್ಮ ಸರ್ಕಾರವು ಸಂಕಷ್ಟದಲ್ಲಿರುವ ರೈತರ ಪರವಾಗಿ ನಿಲ್ಲುತ್ತದೆ. ರೈತರ ಕಷ್ಟ-ನಷ್ಟಗಳನ್ನು ತಿಳಿದುಕೊಳ್ಳಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವೈಜ್ಞಾನಿಕ ವರದಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶೇಕಡ 100ರಷ್ಟು ಹಾನಿ: ಇಂಡಿ ತಾಲೂಕಿನಲ್ಲಿ ಶೇಕಡ 100 ರಷ್ಟು ಬೆಳೆಗಳು ಹಾನಿಗೀಡಾಗಿವೆ. ಕಳೆದ ವಾರ ಕೆಲವು ಕಡೆ ಭೇಟಿ ನೀಡಿದ ವೇಳೆ ಅಲ್ಲಿಯ ಬೆಳೆಗಳು ಶೇಕಡ 80ರಷ್ಟು ಹಾಳಾಗಿದ್ದವು. ಈಗ ಶೇಕಡ 20 ರಷ್ಟು ಹಾನಿಯಾಗಲಿವೆ. ಹಾಗಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಸಚಿವರು ತಿಳಿಸಿದರು. ರೈತರ ಸಮಸ್ಯೆಯನ್ನು ಖುದ್ದಾಗಿ ಅನುಭವಿಸಿದೆ. ಅವರೆಲ್ಲ ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಈ ಸತ್ಯ ಅರಿತಿರುವ ನಮ್ಮ ಸರ್ಕಾರ ರೈತರ ನೆರವಿಗೆ ಬರಲಿದೆ ಎಂದರು.
ಇಂಡಿ ತಾಲೂಕಿನಲ್ಲಿ 42 ಸಾವಿರ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಾರಿ ಜಿಲ್ಲಾದ್ಯಂತ 2.50 ಲಕ್ಷ ರೈತರು ಬೆಳೆ ವಿಮೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕನಿಷ್ಠ ಪ್ರಮಾಣದ ಬಿತ್ತನೆಯಾಗಿದ್ದು, ಮುಂಗಾರು ಮಳೆಯ ಸಕಾಲದಲ್ಲಿ ಬಾರದೇ ಇರುವುದರಿಂದ ರೈತರು ತೀವ್ರ ಸಮಸ್ಯೆಯಲ್ಲಿದ್ದಾರೆ. ಕೃಷಿ ಜಮೀನುಗಳಿಗೆ ನೇರ ಭೇಟಿ ನೀಡಿ ಬೆಳೆ ಬೆಳವಣಿಗೆ ನೈಜ ಚಿತ್ರಣ ಪಡೆಯುವುದರ ಜೊತೆಗೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರೈತರು ಸಾರ್ವಜನಿಕರು ಉಪಸ್ಥಿತರಿದ್ದರು.



