ಅಂಬೇಡ್ಕರ್ ದಮನಿತ ಸಮಾಜಕ್ಕಾಗಿ ಜೀವನ ತ್ಯಾಗ ಮಾಡಿದವರು: ಡಾ.ಜಗದೀಶ ಕಲ್ಯಾಣ

698

ಪ್ರಜಾಸ್ತ್ರ ಸುದ್ದಿ

ಧಾರವಾಡ: ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನತೆಯನ್ನು ಹೊಂದಿದ್ದಾಗ ಮಾತ್ರ ಪ್ರಬುದ್ದ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ‌ಪ್ರಾಧ್ಯಾಪಕ ಡಾ.ಜಗದೀಶ ಕಲ್ಯಾಣ ಅಭಿಪ್ರಾಯಪಟ್ಟರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಮನಿತ ಸಮಾಜದ ಏಳ್ಗೆಗಾಗಿ ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕನಾಗಿ, ಉದ್ದಾತ ಉನ್ನತ ಪ್ರಖರ ವಿಚಾರಗಳನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವದರ ಜೊತೆಗೆ ಪ್ರಸಾರಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕಿರಣ ಕೋಲ್ಕಾರ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯಕ್ಕೆ ‌ಮಾತ್ರವಲ್ಲದೆ ಕಾರ್ಮಿಕ ಮಹಿಳೆಯರಿಗೆ ಕಾನೂನಿನ ಮೂಲಕ ಅನೇಕ ಹಕ್ಕುಗಳನ್ನು ನೀಡಿದ್ದು ಅವರ ಕೊಡುಗೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಶಿವಾನಂದ ಚೌಗಲಾ ಮಾತನಾಡಿ, ಸಾಮಾಜಿಕ ವ್ಯವಸ್ಥೆ ಬದಲಾಯಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ವಿಶಿಷ್ಠವಾದ ಹೋರಾಟ ಮತ್ತು ಸಂವಿಧಾನದ ಮೂಲಕ ದಮನಿತ ಹಿಂದುಳಿದ ವರ್ಗಗಳಿಗೆ ಜೀವನವನ್ನು ಕೊಟ್ಟಿದ್ದಾರೆ. ಶಿಕ್ಷಣದ‌ ಮಹತ್ವವನ್ನು ತಿಳಿಸಿದ್ದ ಅವರು ಸಂವಿಧಾನದ ರಚನೆಯಲ್ಲಿ ಅನೇಕ‌‌ ಕಾನೂನುಗಳನ್ನು ಜಾರಿಗೊಳಿಸಿದರು. ಅಸಂಘಟಿತ ವಲಯವನ್ನು ಸಂಘಟಿತರಾಗಿಸುವಲ್ಲಿ ಮಹತ್ವದ ಪಾತ್ರ ವಹಿಸದ್ದರು. ಅಂಬೇಡ್ಕರ್ ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಮೌಲ್ಯಯುತವಾದ ಜೀವನ ನಡೆಸಲು ಸಾಧ್ಯ ಎಂದರು.

ಕಾಲೇಜಿನ ಡಾ.ವಿ.ಕೃ.ಗೋಕಾಕ್ ಗ್ರಂಥಾಲಯದಲ್ಲಿ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅಂಬೇಡ್ಕರ್ ಕುರಿತ ಪುಸ್ತಕ ಪ್ರದರ್ಶನವನ್ನು ಒಂದು ವಾರದವರೆಗೆ ಆಯೋಜಿಸಲಾಗಿದೆ. ಡಾ.ವಿ.ಕೃ.ಗೋಕಾಕ್ ಗ್ರಂಥಾಲಯದ ಸಿಬ್ಬಂದಿ ಕಲಾವಿದ ಈರಣ್ಣ ಐನಾಪುರ ಚಿತ್ರಿಸಿದ ಡಾ.ಅಂಬೇಡ್ಕರ್ ಕಲಾ ಚಿತ್ರ ಎಲ್ಲರನ್ನು ಆಕರ್ಷಿಸುತ್ತಿದೆ.

ಕಾರ್ಯಕ್ರಮದಲ್ಲಿ ಡಾ.ವಿ.ಬಿ.ಸಾವಿರಮಠ, ಡಾ.ಎಲ್.ಟಿ.ನಾಯಕ್, ಡಾ.ಜಗದೀಶ್ ಗುಡಗೂರ ಡಾ.ಸರಸ್ವತಿ ಮಾಸ್ತಿ, ಡಾ.ಎಮ್.ಎಸ್.ಸಾಳುಂಕೆ, ಡಾ.ಕಲ್ಪನಾ ದಳವಾಯಿ, ಡಾ.ಮಂಗಳವೇಡಿ, ಡಾ.ರಾಜಪ್ಪ, ಡಾ.ಜಿ.ಎಸ್.ಕುಮ್ಮೂರ, ಡಾ.ಕಿರಣ ಕೊಲ್ಕಾರ, ಡಾ ಕಿರಣಕುಮಾರ್, ಡಾ.ಮಹಾದೇವಯ್ಯ. ಡಾ, ಪ್ರಭಾಕರ್ ಕಾಂಬಳೆ, ಡಾ.ಅಶೋಕ ಆಲಕಟ್ಟಿ, ಡಾ.ರಾಮದಾಸ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!