ಪ್ರಜಾಪ್ರಭುತ್ವ ಭಾರತ ಮತ್ತು ಜಾತಿಗಣತಿ

634

ಇದೀಗ ದೇಶದ ತುಂಬಾ ಸಾಕಷ್ಟು ಚರ್ಚೆಯಾಗುತ್ತಿರುವ ಹಾಗೂ ಕರ್ನಾಟಕದಲ್ಲಿ ಬಹುದೊಡ್ಡ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಜಾತಿಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ, ಯುಕೆ ನಿವಾಸಿ ಕನ್ನಡಿಗ ಬಸವ ಪಾಟೀಲ ಅವರ ಲೇಖನ ಇಲ್ಲಿದೆ.

ಜಾತಿ ಮತ್ತು ಜಾತೀಯತೆಯನ್ನ ಭಿನ್ನವಾಗಿ ಕಾಣಬೇಕು. ಅಸ್ಪೃಶ್ಯತೆ ಮತ್ತು ಬಡತನವನ್ನ ಬೇರೆಯಾಗಿ ಕಾಣುವ ಬಗೆಯಲ್ಲಿ, ಭಾರತದಲ್ಲಿ ಜಾತಿ ಹುಟ್ಟಿದ್ದು ಶ್ರೇಣಿಕೃತ ವ್ಯವಸ್ಥೆಯ ಭಾಗವಾಗಿ. ಅದು ಈಗ ಘನವಾದ ಜಡ ವ್ಯವಸ್ಥೆ! ಅದನ್ನ ಅಲ್ಲಗೆಳೆಯುವ ಮತ್ತು ಸಮಾಜೀಕ ಸಮಾನತೆ ತರುವ ಬಹು ದೊಡ್ಡ ಚಳುವಳಿ, ಹೋರಾಟ ಮತ್ತು ಕ್ರಾಂತಿಗಳು ನಡೆದಾಗ್ಯು ಕೂಡಾ ಅದನ್ನ ಬುಡ ಸಮೇತ ಕೀಳುವ ಪ್ರಯತ್ನ ಇನ್ನು ಜಾರಿಯಲ್ಲಿಯೆ ಇದೆ.

ರಾಜಕೀಯ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೊಡ್ಡ ಆಶಾಭಾವನೆ ಮೂಡಿಸಿ, ಜಾತೀಯ ವ್ಯವಸ್ಥೆಯಲ್ಲಿ ಅಲ್ಪ ಸ್ವಲ್ಪ ಸಮಾನತೆ ಭಾವ ಮೂಡಿಸಿದರು. ಜಾತೀಯ ಭಾವ ಮತ್ತು ಕುಲ ಶ್ರೇಷ್ಟತೇಯ ವ್ಯಸನಕ್ಕೆ ಔಷಧಿ ಕಂಡುಕೊಳ್ಳಲು ಇನ್ನೂ ಆಗಿಲ್ಲ ಅನ್ನುವುದೆ ನೋವಿನ ಸಂಗತಿ.

ಸ್ವತಂತ್ರ ಭಾರತದಲ್ಲಿ ಸಮಾಜೀಕ ಪ್ರಾತಿನಿಧ್ಯತೆ ಕೂಡಾ ಕೆಲ ಕುಲ ಶ್ರೇಷ್ಠತೆಯ ವ್ಯಸನಕ್ಕೆ ಖಾರವಾಗಿ, ಹೊಟ್ಟೆ ಕಿಚ್ಚಿಗೆ ಎಡೆಯಾಗಿದೆ. ಸಮಾಜಿಕ ಪ್ರಾತಿನಿಧ್ಯ ಅನ್ನೋದು ಬಡತನ ನೀಗಿಸುವ ಕಾರ್ಯಕ್ರಮದ ದೃಷ್ಟಿಕೋನದಲ್ಲಿ ನೋಡುವವರಿಗೆ ಕುಲ ಶ್ರೇಷ್ಠತೆಯ ನಂಜು ಇಳಿದಿಲ್ಲ. ಅದು ಇಳಿಯೊದೆ ಇಲ್ಲ ಅನ್ನುವಷ್ಟು ಮತ್ತೆ ಮತ್ತೆ ಗಟ್ಟಿ ಆಗುತ್ತಿದೆ. ನಂಬಿಕೆ ಮತ್ತು ಪೌರಾಣಿಕ ಮನಸ್ಥಿತಿಯ ಮುಗ್ಧ ಜನರ ವೈಚಾರಿಕ ಪ್ರಜ್ಞೆಯನ್ನ ಹಾಳು ಮಾಡುವ ಮಟ್ಟಿಗೆ ಅದರ ವಿಷ ಬೆರತಿದೆ. ಬೇರೆ ಬೇರೆ ಮತಗಳ ನಡುವಿನ ಭಿನ್ನ ಅಭಿಪ್ರಾಯಕ್ಕಾಗಿ, ನಾವೆಲ್ಲಾ ಒಂದು ಅನ್ನುವ ಹುಸಿ ಮಾತಿನಲ್ಲಿಡಗಿರುವುದು ಪ್ರಖರ ಶ್ರೇಣಿಕೃತ ವ್ಯವಸ್ಥೆಯ ಷಡ್ಯಂತರ. ವಾಸ್ತವದಲ್ಲಿ ನಾವೆಲ್ಲಾ ಒಂದು ಎನ್ನುವುದಕ್ಕೆ ತಾತ್ಪರ್ಯ ಮತ್ತು ಸಮಕಾಲಿನತೆನೆ ಇಲ್ಲ.

ಜಾತಿ ಸಾಮಾಜಿಕ ಕುರುಹು ಆಗಿಬಿಟ್ಟಿದೆ. ಅದಕ್ಕೆ ಪೂರಕವಾಗಿ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ಸ್ಥಳಗಳು ನಿರ್ಮಾಣ ಆಗಿವೆ. ಅಂತಹದರಲ್ಲಿ ದಮನಿತ ಜಾತಿಗಳನ್ನ ಸಮಾಜಿಕವಾಗಿ ಗುರತಿಸುವುದು ಮತ್ತು ಗಣತಿ ಮಾಡುವುದು ಪ್ರಜಾಪ್ರಭುತ್ವ ಸರಕಾರಗಳು ಮಾಡಲೇ ಬೇಕಾದ ಕೆಲಸ. ಜಾತಿಗಳನ್ನು ಗುರುತಿಸುವುದರಿಂದ ಸಮಾಜ ಒಡೆಯುತ್ತೆ ಅನ್ನುವ ಊಹಾಪೋಹ ಹಬ್ಬಿಸುವ ಕೆಲವು ವಿಚ್ಛಿದ್ರ ಶಕ್ತಿಗಳ ಬಗ್ಗೆ ಗಮನವಿರಲಿ. ಹೇಗೆ ಧಾರ್ಮಿಕ ಸ್ವಾತಂತ್ರ್ಯದ ಮಾನ್ಯತೆ ಬೇಡಿಕೆ ಕೂಡಾ ಸಮಾಜ ಒಡೆಯುತ್ತೆ ಅಂತ ಪುಂಗಿ ಊದಿದರೋ ಅದೆ ಕುಲ ಶ್ರೇಷ್ಠತೆಯ ಜನ ಮತ್ತೆ ಜಾತಿ ಜನಗಣತಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ.

ಜಾತಿ ಜನಗಣತಿ ವಾಸ್ತವಿಕ ಮಾಹಿತಿ ಒದಗಿಸುತ್ತೆ. ಆಯಾ ಜಾತಿಯ ಜನರ ಸಮಾಜಿಕ ಸ್ಥಿತಿಗತಿಗಳ ಬಗ್ಗೆ ಒಂದು ವ್ಯಾಪಕವಾದ ಮಾಹಿತಿ ಸಿಗುತ್ತೆ. ಸರಕಾರಿ ಯೋಜನೆಗಳ ವ್ಯವಸ್ಥಾಪನೆ, ಜನರ ಭಾಗಗೊಳ್ಳುವಿಕೆಯ ಮಜಲುಗಳು ಬಗ್ಗೆ ವಾಸ್ತವ ವರದಿ ಸಿಗುತ್ತೆ. ನೈಸರ್ಗಿಕ ಸಂಪನ್ಮೂಲ, ಸಮುದಾಯ ಸಂಪತ್ತು ಮತ್ತು ಅಧಿಕಾರಗಳ ವಿಕೇಂದ್ರಿಕರಣ ಕ್ರಮಬದ್ಧವಾಗಿ ಮಾಡುಲು ಜಾತಿ ಜನಗಣತಿ ಅತ್ಯಂತ ಅವಶ್ಯಕ.

ಜಾತಿ ಜನಗಣತಿ ಮಾಡಿದರೆ, ಜಾತೀಯತೆ ಹೆಚ್ಚುತ್ತೆ ಅನ್ನೋದು ಶುದ್ಧ ಮೂರ್ಖತನ. ಹಾಗೆಯೆ ಜಾತಿಜನಗಣತಿಯಿಂದ ರಾತ್ರೋರಾತ್ರಿ ಸಮಾನತೆ ಬಂದೆ ಬಿಡುತ್ತೆ ಅನ್ನೋದು ಹಗಲುಗನಸು. ಯಾಕೆಂದರೆ, ಸಮಸಮಾಜ ಮತ್ತು ಸಮಾನತೆ ಜೊತೆಗೆ ವೈವಿಧ್ಯತೆಯನ್ನ ಕಾಯ್ದುಕೊಂಡು ಹೋಗುವಂತಹ ವ್ಯವಸ್ಥೆಯ ನಿರ್ಮಾಣ ಅದು ನಿರಂತರ ಕೆಲಸ. ಬೇರೆ ಬೇರೆ ಆಯಾಮಗಳಿಂದ, ಮಾರ್ಗಗಳಿಂದ, ಸಂವಿಧಾನದಿಂದ, ಸರಕಾರಗಳಿಂದ, ಸಮುದಾಯಗಳಿಂದ ಪ್ರಯತ್ನ ಮಾಡುತ್ತಲೆ ಇರಬೇಕು. ಜಾತಿ ಮತ್ತು ಜಾತೀಯತೆ, ಆರ್ಥಿಕ ಸಬಲೀಕರಣ ಮತ್ತು ಪ್ರಾತಿನಿಧ್ಯತೆ ಇವುಗಳ ನಡುವಿನ ಮತ್ತು ಪ್ರತ್ಯೇಕವಾಗಿ ಆ ಪದಗಳ ಅರ್ಥೈಸುವ, ವ್ಯಕ್ತಪಡಿಸುವ ನಾಯಕರು ಹುಟ್ಟುತ್ತಿರಲಿ. ಸಾಮಾಜಿಕ ಸಮಾನತೆ ಮತ್ತು ಸಮಾಜಿಕ ನ್ಯಾಯ ಸರಕಾರಗಳ ಭದ್ರ ಭುನಾದಿಯಾಗಲಿ.

ಲೇಖಕ ಬಸವ ಪಾಟೀಲ, ಯುಕೆLeave a Reply

Your email address will not be published. Required fields are marked *

error: Content is protected !!