ಬಸವ ಅನುಯಾಯಿ ಡಾ.ಬಿ.ಡಿ ಜತ್ತಿ

3171

ಗ್ರಾಮ ಪಂಚಾಯ್ತಿಯಿಂದ ದೇಶದ ಪ್ರಥಮ ಪ್ರಜೆಯ ಹುದ್ದೆಯ ತನಕ ಏರಿದ ನಾಡಿನ ಏಕೈಕ ಬಸವ ಅನುಯಾಯಿ ಡಾ.ಬಿ.ಡಿ ಜತ್ತಿ ಅವರು ನಮ್ಮನ್ನು ಅಗಲಿ ಇಂದಿಗೆ 17 ವರ್ಷಗಳು ಕಳೆದಿವೆ. ಅವರ ನೆನಪು ಮಾಡಿಕೊಳ್ಳುವ ಲೇಖನವನ್ನ ಸಂಗಮೇಶ ಎನ್ ಜವಾದಿ ಅವರು ಬರೆದಿದ್ದಾರೆ.

ಇವರು ಬಸವ ತತ್ತ್ವ ಪ್ರಚಾರದ ರೂವಾರಿ. 12ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲಿನ ಶರಣರ ವಚನ, ತತ್ವಗಳ ಸಂದೇಶಗಳನ್ನ ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಿ.ಡಿ ಜತ್ತಿ. 1964ರಲ್ಲಿ ಬಸವ ಸಮಿತಿ ಸ್ಥಾಪಿಸಿ ಮಹತ್ವದ ಕಾರ್ಯ ಮಾಡುವ ಮೂಲಕ ಲಕ್ಷಾಂತರ ಬಸವಾಭಿಮಾನಿಗಳ ಹೃದಯ ಗೆದ್ದ ನಾಡಿನ ಸರಳ, ಸ್ನೇಹ ಜೀವಿ ನಾಯಕ ಡಾ.ಬಿ.ಡಿ.ಜತ್ತಿಯವರು.

ಜತ್ತಿಯವರ ಆಶೆಯದಂತೆ ಬಸವ ಸಮಿತಿಯು ಅಂದಿನಿಂದ ಇಂದಿನವರೆಗೆ ಧರ್ಮ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ, ಬಸವ ಸಂದೇಶಗಳನ್ನ ವಿಶ್ವಾದ್ಯಂತ ಮುಟ್ಟಿಸುವ ಕಾಯಕವನ್ನ ಅಚ್ಚುಕಟ್ಟಾಗಿ ಪ್ರಚಾರ ಮಾಡುತ್ತಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ  ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜತ್ತಿಯವರು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ಈ ಗ್ರಾಮ ಅಂದಿನ ಮುಂಬೈ ಪ್ರಾಂತ್ಯದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಒಬ್ಬ ವ್ಯಾಪಾರಿಯ ಮಗನಾದ ಇವರು, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಮುಗಿಸಿದ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ  ಕೊಲ್ಲಾಪುರದ ರಾಜಾರಾಂ ಕಾಲೇಜು ಸೇರಿದ್ರು. ಆರ್ಟ್ಸ್ ಪದವಿ ಪಡೆದ ಬಳಿಕ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿ ಗಳಿಸಿದರು.

ಮುಂದೆ 1940ರಲ್ಲಿ ಜಮಖಂಡಿಯಲ್ಲಿ ವಕೀಲರಾಗಿ ಬದುಕು ಆರಂಭಿಸಿದ ಇವರು, ನಂತರ ರಾಜಕಾರಣಿಯಾಗಿ ತಮ್ಮ ಜೀವನವನ್ನ ಸಮಾಜ ಸೇವೆಗೆ ಅರ್ಪಿಸಿದ್ರು. ಅಲ್ಲದೆ ಅವರದೆ  ಊರಿನ ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಅದನ್ನ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಮಖಂಡಿಯ ಪುರಸಭೆಯ ಸದಸ್ಯರಾಗಿ ಎರಡು ಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ಇನ್ನು ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು.

ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟ ರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಸತತ ಪ್ರಯತ್ನ ಮಾಡಿ ಯಶಸ್ವಿಯಾದರು.

ಬಸವಾದಿ ಪ್ರಥಮರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು, ಶರಣರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಲು ಪ್ರಯತ್ನ ಮಾಡುತ್ತಲೇ, ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಚಿಂತನೆ ನಡೆಸುತ್ತಿದರು. ಇವರ ದೇಶ ಪ್ರೇಮ, ಸಮಾಜ ಸೇವೆ ಕಂಡು ಅಂದಿನ ಮುಂಬೈ ಪ್ರಾಂತ್ಯದ ಪ್ರತಿನಿಧಿಗಳು ಇವರನ್ನು ಮುಂಬಯಿ ರಾಜ್ಯ ಶಾಸನ ಸಭೆಗೆ ನಾಮ ನಿರ್ದೇಶನ ಮಾಡಿದರು. ನಂತರ ಇವರ ನಿಸ್ವಾರ್ಥ ಜನಸೇವೆಯ ಮನೊಧರ್ಮ ಕಂಡ ಅಂದಿನ ನಾಯಕರು ಜತ್ತಿಯವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಅಂದಿನಿಂದ ಜತ್ತಿಯವರ ರಾಜಕೀಯ ಜೀವನ ಮೇಲೇರುತ್ತಾ ಸಾಗಿತು.

ಮುಂದೆ ಮುಂಬೈ ಪ್ರಾಂತ್ಯದ 1952ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜತ್ತಿಯವರು ಸ್ವರ್ಧಿಸಿ ಗೆಲುವು ಸಾಧಿಸಿದರು. ಅಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಜೊತೆಗೆ ಆರೋಗ್ಯ ಖಾತೆ ನೀಡಲಾಯ್ತು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಜತ್ತಿಯವರು ಮೈಸೂರು ಶಾಸನಸಭೆಯ ಅಧ್ಯಕ್ಷರಾಗಿ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿ ಜನಮೆಚ್ಚುಗೆಗೆ ಪಾತ್ರರಾದರು.

1956ರಲ್ಲಿ ರಾಜ್ಯ ಪುನರ್ ರಚನೆಯ ನಂತರ ಜತ್ತಿಯವರು ನೂತನ ಕರ್ನಾಟಕ ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯದ ಭೂಸುಧಾರಣಾ ಕಾಯ್ದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು. 1957 ಮತ್ತು 1967ರ ಚುನಾವಣೆಗಳಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾದರು. 1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಮೂಲಕ ಕರ್ನಾಟಕದ ಮುಖ್ಯಮಂತ್ರಿಯಾದರು. ಅನಿರೀಕ್ಷತವಾಗಿ ಬಂದ ಹೊಣೆಯನ್ನ 1962ರ ತನಕ ನಡೆಸಿದರು.

ಬಸವ ಸಮಿತಿಗೆ 50ರ ಸಂಭ್ರಮ, ಏಪ್ರಿಲ್ 29, 2017ರಲ್ಲಿ ಕಾರ್ಯಕ್ರಮ

3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು. 1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ 4ನೇ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ 5ನೇ ಉಪರಾಷ್ಟ್ರಪತಿಯಾಗಿ 1980ರ ವರೆಗೆ ಸೇವೆ ಸಲ್ಲಿಸಿದರು.

ರಾಷ್ಟ್ರಪತಿ ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಹೀಗೆ ರಾಜಕೀಯ ಜೀವನದಲ್ಲಿ  ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ “ಜಟ್ಟಿ”ಎಂದು ಜತ್ತಿ ಹೆಸರು ಗಳಿಸಿದ್ದರು. ಗ್ರಾಮ ಪಂಚಾಯ್ತಿಯಿಂದ ಈ ದೇಶದ ಪ್ರಥಮ ಪ್ರಜೆಯ ಹುದ್ದೆಯನ್ನ ಅಲಂಕರಿಸಿದ ನಾಡಿನ ಏಕೈಕ ಬಸವ ಅನುಯಾಯಿ ಡಾ.ಬಿ.ಡಿ ಜತ್ತಿ.




2 thoughts on “ಬಸವ ಅನುಯಾಯಿ ಡಾ.ಬಿ.ಡಿ ಜತ್ತಿ

Leave a Reply

Your email address will not be published. Required fields are marked *

error: Content is protected !!