ಜ್ಯೋತಿ ಜಗವ ಬೆಳಗೆ-ಬಸವ ಜ್ಯೋತಿ ಜಗವ ಬೆಳಗೆ

501

ಪ್ರಜಾಸ್ತ್ರ ವಿಶೇಷ ಲೇಖನ

ಗುಮ್ಮಟನಗರಿ ಜಿಲ್ಲೆಯ ಹೆಸರು ಬದಲಾಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಯುಕೆದಲ್ಲಿ ನೆಲೆಸಿರುವ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿಯ ಬಸವ ಪಾಟೀಲ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈಯಕ್ತಿಕ ನೆಮ್ಮದಿಗಾಗಿ ಮತ್ತು ಕೌಟುಂಬಿಕ ಸಮಯದ ಅಭಾವಕ್ಕಾಗಿ ತಿಂಗಳ ಹಿಂದೆ ಒಂದು ಪ್ರತಿಜ್ಞೆ ಮಾಡಿದ್ದೆ ಅದರಂತೆ ಪಾಲಿಸುತ್ತ, ಕೆಲವು ನಾಡಿನ ವಿಷಯಗಳ ಚರ್ಚೆಯಿಂದ ವಿಮುಖವಾಗಿದ್ದೆ, ಆದರೂ ಕೆಲವು ಗೆಳೆಯರು, ನಮ್ಮ ಜಿಲ್ಲೆಯ ಹೆಸರಿನ ಕುರಿತು ಜಿಲ್ಲಾಡಿಳಿತ ತಮ್ಮ ಗಮನಕ್ಕೆ ಬಂದ ವಿಚಾರವನ್ನ ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಭಾಳ ಚರ್ಚೆ ನಡದಾದ, ಈಗೀನ ಯುವಜನಾಂಗದ ಭಾಷ್ಯಾದಾಗ ಹೇಳಬೇಕಂದರ “ಭರಚಕ್ ವೈರಲ್” ಆಗ್ಯಾದ!

ಅಂದಂಗ ಈ ವಿಷಯ, ನನಗ ಮಾನಸಿಕವಾಗಿ,, ಸಮಾಜಿಕವಾಗಿ, ಧಾರ್ಮಿಕವಾಗಿ ಭಾಳ ಹತ್ತರದ ವಿಷಯ. ಹಂಗಾಗಿ ನನಗ ಮನಸ್ಸಿಗಿ ತಡಕೊಳ್ಳಲಕ್ಕ ಆಗಲಿಲ್ಲ, ಅದರ ಸಮಂದ ಈ ಬರಹ. ಓದುಗರೆಲ್ಲರಿಗೂ, ಶರಣು ಶರಣಾರ್ಥಿ ಮತ್ತು ಭೀಮವಂದನೆಗಳು.

ಬಸವಣ್ಣನ ನಾಡಿನ ಶರಣ ಶರಣೆಯರೆ, ಆಗಲೆ ನಿಮ್ಮ ಮನೆ ಮತ್ತು ಮನಕ್ಕ, ಜಿಲ್ಲಾದ ಹೆಸರಿನ ಬದಲಾವಣೆ ಸುದ್ದಿ ತಲುಪಿರಬೇಕು. ಅದು ನಿಮ್ಮ ಮನದಲ್ಲಿ ಹಲವು ವಿಚಾರಗಳ ತಲ್ಲಣ, ಸಾಧಕ ಬಾಧಕಗಳ ಜಿಜ್ಞಾಸೆ, ರಾಜಕಾರಣದ ಲೆಕ್ಕಾಚಾರ ತಾಳೆ ನಡೆದೀರಬೇಕು. ಹಂಗೆ ನಾನು ನಿಮ್ಮಂಗ ತಾಳೆ ಹಾಕಲಕ್ಕ ಪ್ರಯತ್ನ ನಡಿಸೀನಿ. ಅದು ಈ ಬರಹದಾಗ ನಿಮಗ ಕಂಡಬರತಾದ ಓದತಾ ಹೋಗಿ, ಹಂಗೆ ನೀವು ಇಲ್ಲಿ ಮಂಡಿಸಿದ ವಿಚಾರಗಳ ಮ್ಯಾಲ ಲೆಕ್ಕ ಹಾಕರಿ. ಬರ್ರಿ ಒಂದೆೊಂದು ಎಳಿ ಎಳಿಯಾಗಿ ಉಳ್ಳಗಡ್ಡಿ ಪದರ ತೆಗೆದಂಗ ತೆಗೀತಾ ಹೋಗಿ ಬಯಲಾಗಿ ಬಿಡಾಮರಿ. ಮೊದಲ ತಟಕ ಭಿನ್ನ ವಿಚಾರ ಬಗ್ಗೆ ಬೆಳಕ ಚೆಲ್ಲಾಮರಿ.

1. ಹೆಸರ ಈಗೊಂದ ಸಲ ಬದಲಸೀವಿ, ಮತ್ಯಾಕ ಬದಲ ಮಾಡಬೇಕು?

ಹೌದಪ್ಪ ಅದು ಖರೆ, ಹೊಳ್ಳಿ ಮುಳ್ಳಿ ಹೆಸರ ಬದಲ ಮಾಡೂದರಿಂದ ಲಾಭರೆ ಏನು? ಅಂತ ಮನಸ್ಸನ್ಯಾಗ ಹೊಳಿಬಹುದು. ಆದರ ಪೌರಾಣಿಕ ಹೆಸರ ಇಡಮುಂದ ಇರಲಾರದ ಈ ಕಾಳಜಿ ಐತಿಹಾಸಿಕ ಬಸವಣ್ಣನ, ಸಮಸಮಾಜದ ಕಲ್ಪನೆ ಕೊಟ್ಟು 770 ಮಂದಿ ಶರಣರನ್ನ ಕಟಕೊಂಡು ಭಾರತದಲ್ಲೇ ಮೊದಲ ಬಾರಿಗೆ ಅನುಭವ ಮಂಟಪ ನಿರೂಪಿಸಿದ, ಅಣ್ಣನ ಹೆಸರಿಟ್ಟರ ತ್ರಾಸ ಯಾಕ?

ದೇವರ ಅಂದರ ಜಗದಗಲ ಮುಗಿಲಗಲ, ಮಿಗೆಯಗಲ ಅಂದ ಅಣ್ಣ. ಅಂತಹ ಅಣ್ಣನ ದಿನ ನೆನಸ ಬೆಕಂತಲೆನೆ ಅಲಾ ಇಡಿ ಜಿಲ್ಲಾದಾಗ ಕಮ್ಮಿಸಿ ಕಮ್ಮಿ ಮನಿಗಿ ಒಬ್ಬರ ಹೆಸರರೆ ಬಸವ, ಬಸವಲಿಂಗಪ್ಪ, ಬಸಲಿಂಗಮ್ಮ, ಬಸನಗೌಡ, ಬಸವರಾಜ, ಬಸವಪಟ್ಟಣ, ಬಸಮ್ಮ, ಬಸವರೆಡ್ಡಿ, ಬಸವ ಸಾಗರ ಇತ್ಯಾದಿ ಹೆಸರಿಟ್ಟಾರ! ಅಟೆ ಅಲ್ಲ ಮನಿ ಮ್ಯಾಲ, ವಾಣಿಜ್ಯ ವ್ಯಾಪರ ಮಳಿಗಿ, ಅದು ಬಿಡರಿ ಎತ್ತಿನ ಕೊಟಿಗಿಗೂ ಬಸವ ಕುಟಿರ ಅಂತ ಹೆಸರ ಇಟ್ಟಾರ. ಬರೆ ಒಂದೆ ಜಾತಿ ಮಂದಿ ಅಲ್ಲಾ, ಲಿಂಗಾಯತ ಧರ್ಮದ 99ಕ್ಕೂ ಹೆಚ್ಚು ಕಾಯಕ ಪಂಗಡಗಳು ಅಣ್ಣನ ಹೆಸರ ಇಟ್ಟಾರ! ಇದು ಉತ್ತರ ಕರ್ನಾಟಕದಲ್ಲಿ ಭಾಳ ಸರ್ವೆ ಸಾಮನ್ಯ.

ಹಂಗಾಗಿ, ಮೊದಲ ಮಾಡಿದ ತಪ್ಪನ್ನ ಇನ್ನೊಂದು ಸಲ ಮಾಡಿ ತಿದ್ದಕೊಂಡರ ಏನ ತಪ್ಪಾಗತ್ತಾ ಅನ್ನೋ ಪ್ರಶ್ನೆ ಮೂಡತ ನೋಡರಿ ನನ್ನ ಮನದಾಗ. ಇದು ತಟಕ ಒಂದೆ ತತ್ವ ಕಡೆ ನಂದ ಒಲುವ ಆಯಿತಿ ಅಂತ ನೀವು ಈಗ ಗ್ರಹಿಸರಬೇಕು. ಅದು ಒಪ್ಪುವಂತದ್ದೆ ಆದರ ತಟಕ ನೀವು ಈ ದಾಟ್ಯಾಗ ವಿಚಾರ ಮಾಡರಿ. ನೀವು ಹೆಸರಿಡಲಿಲ್ಲ ಅಂದರು ನಮ್ಮಣ್ಣ ಏನು ನಿಮಗ ಶಾಪನು ನೀಡಲ್ಲ. ಲೋಕದೊಳತಿಗಿ ಹೋಮ ಹವನ ಮಾಡಿ ಮಣ ಮಣ ತುಪ್ಪಾನು ಸುರಿರಿ ಅಂತಾ ಯಾರ ಮೈಯಾಗರೆ ಹೊಕ್ಕು, ಪಂಚಾಂಗದಾಗ ಹೊಕ್ಕು ಹುಸಿಯ ನುಡಿಯವನಲ್ಲ ನಮ್ಮಣ್ಣ. ಎನಗಿಂತ ಕಿರಿಯರಿಲ್ಲಾ ಅಂದಾವ ನಮ್ಮಣ್ಣ ಬಸವಣ್ಣ!

ಅಂದಂಗ ಇಡೂದೆ ಖರೆ ಆದರ, ಬಸವೇಶ್ವರ, ಬಸವಾಚಾರ್ಯ ಅಂತ ಇಡಬ್ಯಾಡರಪ್ಪೊ. ಮತ್ತ ಹೊಳ್ಳಿ ಅವನಿಗಿ ಬಸವಣ್ಣನ ಮಾಡಲಕ್ಕ 800-900 ವರ್ಷ ಕಳಿಬೇಕಾಗತಾದ. ಮತ್ತ ಭಾಳ ಮಂದಿ ಹುಟ್ಟಿ, ಜೀವನ ತೇಯ್ದು, ಉಡಾಳ ಹುಡುಗರ ಗುಂಡಿಗಿ ಬಲಿಯಾಗಬೇಕಾಗತಾದ. ಮೊದಲ ಬದಲಸ ಮುಂದ ಏನು ಬಲವಾದ ಕಾರಣಗಳಿದ್ದವು? ಅನ್ನುದ ತಟಕ್ಕ ವಿಚಾರ ಮಾಡರಿ ಅಲ್ಲಾ.

2. ಆಡಳಿತ್ಮಾಕ ಲಾಭ ಲುಕ್ಸಾನದ ಹೊಣೆಗಾರಿಕೆ.

ಖಾಲಿ ಪುಕ್ಸಟ್ಟೆ ಇಟ್ಟ್ಯಾಕ ಖರ್ಚ ಅನ್ನೋ ವಿಚಾರನು ತಲ್ಯಾಗ ಹೊಳಿತು. ಹೌದು, ಇದು ಖರೇನೆ. ಏನಿಲ್ಲ ಅಂದರೂ ಅಜಮಾಸ್ ದೊನ್ ತಿನಸೆ ಕೋಟಿ ಖರ್ಚ ಆಗತಾದ ಸರಕಾರಕ್ಕ (ಜಂಗಮಕ್ಕ). ಈ ಖರ್ಚೆಗೆ ಹೊಣೆಗಾರರು ಯಾರು? ಸಮಾಜ. ಹಂಗಂದರೆ ಇಡೀ ಜಿಲ್ಲಾದ ಮಂದಿ ಸಹಮತ ಬೇಕಾಗತಾದ. ಅಂದರ ಈ ವಿಷಯ ಚುನಾವಣೆಯ ವಿಷಯ ಆಗಬೇಕು. ಯಾರು ಈ ವಿಷಯವನ್ನ ಸಮರ್ಥಿಸಿ ಆರಿಸಿ ಬರತಾರ ಅವರು ಆಗ ಈ ನಿರ್ಣಯವನ್ನ ತಗೊಳುದು. ಪ್ರಜಾಸತ್ಮಕ ನಿಲುವ ಆಗೂದರಾಗ ತಟಕು, ಸಂಶಯ ಇಲ್ಲ.

ಈ ತರ್ಕ ನನಗ ಬ್ಯಾರೆ ಆಯಾಮದಲ್ಲಿ ವಿಚಾರ ಮಾಡಲಕ್ಕ ತಳ್ಳತು. ಹೌದಲ್ಲ ಖಾಲಿ ಪುಗ್ಸಟ್ಟೆ ಬೋರ್ಡ್ ಮ್ಯಾಲ ಹೆಸರ ಬರೆದರ ಆಗೂದೇನು ಹೋಗುದೇನು? ಅಣ್ಣ ಪ್ರತಿಪಾದಿಸಿದ  ದಾಸೋಹದ ಮೌಲ್ಯಕ್ಕ ಅಪಮಾನ ಆಗುತ್ತಲ್ಲಾ? ಅದರ ಬದಲಿ, ಜಂಗಮಕ್ಕ(ಸಮಾಜಕ್ಕ) ಬೇಕಾದ ಮೂಲ ಅವಶ್ಯಕತೆಗಳಾದ  ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಮತ್ತ ಅಭಿವೃದ್ಧಿಯಂತಹ ಯೋಜನೆಗಳ ಮಾಡಿ “ಜಂಗಮ ದಾಸೋಹಿ”ಆಗೂವದು ಛೋಲೊ ಅಲಾ?

“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲೊಳು ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ!” ಸಮಾಜದಲ್ಲಿರುವ ಅಸಾಮನತೆಯ ಹುಲ್ಲು ಕೀಳಲು, ದಾಸೋಹಿಯಾಗಬೇಕೆ ವಿನಃ ಅಣ್ಣ ಬಸವಣ್ಣನ “ಬೆಟ್ಟದ ಲಿಂಗ” ಮಾಡಲು ಹೊಂಟಿವಿ ಅನ್ನುವ ಭಾವ ಸುಳಿಯಿತು.

3. ಜಂಗಮವನ್ನ ಘನೀಕರಿಸದರೆ ಶರಣರು? ಇಲ್ಲ ಜಂಗಮದ ಜಡತ್ವ ಅಳಿದು, ಚಲನಶೀಲತೆಯನ್ನ ತುಂಬಿದರೆ? ಈ ಪ್ರಶ್ನೆ ತಲ್ಯಾಗ ಮೂಡತಾ ಇದ್ದಂಗ, ಶರಣ ಹರಳಯ್ಯನವರ ಕಲ್ಪಿತ ಚಿತ್ರ ಥಟ್ಟನೆ ಕಣ್ಣ ಮುಂದೆ ಬಂತು, ಅದೆ ಕಣ್ಣ ಮುಂದಿನ ಬೆಳಕ ಅರಿವು!

ಅಣ್ಣನ ಹೆಸರಲೆ ಏನರೆ ಮಾಡಬೇಕಂದರ ಮೊದಲ ಕೆಲಸಾನ ಅಸ್ಪೃಶ್ಯತೆ ಕಳೆಯೋದು. ಮೊದಲ ಹೆಜ್ಜೆ ಅಂದರ ಲಗ್ಣ! ಮಾಡಮ ಬರ್ರಿ ಅಣ್ಣಾ ಬಸವಣ್ಣ ಕಲ್ಯಾಣ ಮಹೋತ್ಸವ ಇಡೀ ಜಿಲ್ಲಾ ಮಂದಿ ಕೂಡಿ ಇವನಾರವ, ಇವನಾರವ ಎನಿಸದೆ, ಇವ ನಮ್ಮವ, ಇವ ನಮ್ಮವ ಅನ್ನುವ ಕೂಡಿಕೊಳ್ಳುವಿಕೆಯೆ ಅಣ್ಣನ ನೆನಹುವಿನ ಭಾವಚಿತ್ರ!

ಈ ಮೂರು ವಿಚಾರ, ಮೊದಲನೆ ಪ್ರಶ್ನೆ ಕೇಳಿದವರು, ತಾವೆ ಆತ್ಮಾವಲೋಕನ ಮಾಡಕೋರಿ ಮತ್ತೊಮ್ಮಿ. ಎರಡನೆ ಪ್ರಶ್ನೆ ಕೇಳಕೊಂಡವರು ಸರಕಾರದ ಜೊತಿ ಸಂವಾದ ಮಾಡರಿ. ಮೂರನೆ ಪ್ರಶ್ನೆ ತಯ್ಯಾರಿ ಚಾಲು ಮಾಡುಮ ಬರ್ರಿ. ಇಟ್ಚುದ್ದು ಬರಿದಿದ್ದು ಓದಿ, ನಿಮ್ಮ ಮನದಲ್ಲಿ ಅಣ್ಣನ ವೈಚಾರಿಕತೆಯ ಸರಳಭಾವ ಮೂಡಿದರೆ ಅದಕಿನ್ನ ದೊಡ್ಡ ಖುಷಿ ಮತ್ತೊಂದಿಲ್ಲ. ಮತ್ತೊಮ್ಮೆ ಎಲ್ಲರಿಗೂ, ಶರಣು ಶರಣಾರ್ಥಿ ಮತ್ತು ಭೀಮವಂದನೆಗಳು.
Leave a Reply

Your email address will not be published. Required fields are marked *

error: Content is protected !!