ಈಡನ್ ಗಾರ್ಡ್ ನಲ್ಲಿ ರನ್ ಹೊಳೆ.. ದಾಖಲೆಗಳು ಉಡೀಸ್

92

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲ್ಕತ್ತಾ: ಐಪಿಎಲ್ ಟೂರ್ನಿಯಲ್ಲಿ ರನ್ ಸುರಿಮಳೆಯಾಗುತ್ತಿದೆ. 250ಕ್ಕೂ ಅಧಿಕ ರನ್ ಗಳಿಸುವುದು ಈಗ ತುಂಬಾ ಸರಳವಾಗಿದೆ. ಹೀಗಾಗಿ ಒಂದಾದ ಮೇಲೆ ಒಂದು ತಂಡ 250ಕ್ಕೂ ಹೆಚ್ಚು ರನ್ ಗಳಿಸುತ್ತಿವೆ. ಶುಕ್ರವಾರ ಸಂಜೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದೆ.

ಈ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳು ಸಹ ಆಗಿವೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಪಂಜಾಬ್ ತಂಡದ ಬೌಲರ್ ಗಳನ್ನು ಕೆಕೆಆರ್ ಟೀಂ ಬೆಂಡೆತ್ತಿತು. ಸಾಲ್ಟ್ 37 ಬೌಲ್ ಗಳಲ್ಲಿ 75(6 ಸಿಕ್ಸ್, 6 ಫೋರ್), ಸುನಿಲ್ ನರೈನ್ 32 ಬೌಲ್ ಗಳಲ್ಲಿ 71 ರನ್(4 ಸಿಕ್ಸ್, 9 ಫೋರ್), ವೆಂಕಟೇಶ್ ಅಯ್ಯರ್ 39, ರಸಲ್ 24, ನಾಯಕ ಶ್ರೇಯಸ್ ಅಯ್ಯರ್ 28 ರನ್ ಗಳನ್ನು ಬಾರಿಸಿದರು. ಈ ತಂಡದಿಂದ 18 ಸಿಕ್ಸ್ ಗಳು ಬಂದಿವೆ. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು.

ಈ ಬೃಹತ್ ರನ್ ಚೇಸ್ ಮಾಡಿದ ಪಂಜಾಬ್ ಪಡೆ ಇನ್ನು 8 ಬೌಲ್ ಗಳು ಇರುವಾಗಲೇ ಗೆದ್ದು ಬೀಗಿತು. ಬ್ರಿಸ್ಟೋ ಭರ್ಜರಿ 9 ಸಿಕ್ಸ್, 8 ಫೋರ್ ಗಳೊಂದಿಗೆ 48 ಬೌಲ್ ಗಳಲ್ಲಿ 108 ರನ್ ಚಚ್ಚಿದರು. ಪ್ರಭುಸಿಮ್ರನ್ ಸಿಂಗ್ 5 ಸಿಕ್ಸ್, 4 ಫೋರ್ ಗಳೊಂದಿಗೆ 20 ಬೌಲ್ ಗಳಲ್ಲಿ 54 ರನ್, ಶಶಾಂಕ್ ಸಿಂಗ್ 8 ಸಿಕ್ಸ್, 2 ಫೋರ್ ಗಳೊಂದಿಗೆ 28 ಬೌಲ್ ಗಳಲ್ಲಿ 68 ರನ್ ಗಳಿಸಿದರು. ರುಸ್ವೊ 26 ರನ್ ಗಳಿಸಿದರು. ಪಂಜಾಬ್ ತಂಡದಿಂದ 24 ಸಿಕ್ಸ್ ಗಳು ಬಂದವು. ಹೀಗಾಗಿ 18.4 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 262 ರನ್ ಗಳಿಸುವ ಮೂಲಕ ದಾಖಲೆಯ ಗೆಲುವು ಸಾಧಿಸಿತು.

ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದಲ್ಲಿ 523 ರನ್ ದಾಖಲಾಗಿತ್ತು. ಇಷ್ಟೇ ರನ್ ಕೊಲ್ಕತ್ತಾ-ಪಂಜಾಬ್ ನಡುವೆ ದಾಖಲಾಯಿತು. ಇದೇ ಟೂರ್ನಿಯಲ್ಲಿ ಹೈದ್ರಾಬಾದ್-ಬೆಂಗಳೂರು ತಂಡದ ನಡುವೆ 549 ರನ್ ದಾಖಲಾಗಿದೆ. ಈ ಪಂದ್ಯದಲ್ಲಿ ಒಟ್ಟು 42 ಸಿಕ್ಸ್ ಬಂದಿದ್ದು ದಾಖಲೆಯಾಯ್ತು. ಇನ್ನು ಚೇಸಿಂಗ್ ನಲ್ಲಿ ಆರ್ ಸಿಬಿ (262/7) ದಾಖಲೆಯನ್ನು ಪಂಜಾಬ್ ಮುರಿಯಿತು.




Leave a Reply

Your email address will not be published. Required fields are marked *

error: Content is protected !!