ಬಿಜೆಪಿ-ಜೆಡಿಎಸ್ ಮೈತ್ರಿ ಕೆಲವರಿಗೆ ಕುತ್ತು ತರುತ್ತಾ?

185

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಹಾಗೂ ಜೆಡಿಎಸ್ ಇದೀಗ ಒಂದಾಗಿವೆ. ಕಳೆದೊಂದು ತಿಂಗಳಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆಯಾಗುತ್ತಿತ್ತು. ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದರು. ಶುಕ್ರವಾರ ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸುವ ಮೂಲಕ ಅಧಿಕೃತ ಮೈತ್ರಿ ಘೋಷಿಸಿದ್ದಾರೆ.

ಈ ಮೈತ್ರಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ರಾಜಕೀಯ ನಡೆ ಏನು ಅನ್ನೋ ಚರ್ಚೆ ನಡೆದಿದೆ. ಕಾಂಗ್ರೆಸ್ ನಲ್ಲಿ ತಮಗೆ ಉನ್ನತ ಸ್ಥಾನ ಸಿಗಲಿಲ್ಲವೆಂದು ಜೆಡಿಎಸ್ ಸೇರಿ ರಾಜ್ಯಾಧ್ಯಕ್ಷರಾದರು. ರಾಜಕೀಯ ಆರಂಭದ ದಿನಗಳಿಂದ ಹಿಡಿದು ಇಲ್ಲಿಯ ತನಕ ಜಾತ್ಯಾತೀತ ನಿಲುವಿನೊಂದಿಗೆ ಬಂದಿರುವ ಸಿ.ಎಂ ಇಬ್ರಾಹಿಂ, ಕಾಂಗ್ರೆಸ್ ನಲ್ಲಿ ಇದ್ದಾಗಲೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಜೆಡಿಎಸ್ ಗೆ ಬಂದ್ಮೇಲೂ ಬಿಜೆಪಿ ವಿರುದ್ಧ ಕೋಮ ದ್ವೇಷ ಬಿತ್ತುವ ಪಕ್ಷವೆಂದು ಕಿಡಿ ಕಾರುತ್ತಿದ್ದರು. ಪಕ್ಷದ ವರಿಷ್ಠರ ನಡೆಯಿಂದ ಬಾಯಿಗೆ ಬೀಗ ಹಾಕಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಸೈದ್ಧಾಂತಿಕತೆಯನ್ನು ವಿರೋಧಿಸಿಕೊಂಡು ಬಂದಿರುವ ಜೆಡಿಎಸ್ ನಲ್ಲಿ ಅನೇಕ ನಾಯಕರುಗಳಿಗೆ ಇನ್ಮುಂದೆ ಏನು ಮಾಡಬೇಕು ಅನ್ನೋ ಪ್ರಶ್ನೆ ಮುಂದಿದೆ. ಕಾಂಗ್ರೆಸ್ ರಾಜಕೀಯ ಎದುರಾಳಿಯಾಗಿದ್ದರೂ ವೈಚಾರಿಕವಾಗಿ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಂತಹ ಜೆಡಿಎಸ್ ನಾಯಕರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ. ಅಲ್ಪಸಂಖ್ಯಾತರ ನಾಯಕ ಸಿ.ಎಂ ಇಬ್ರಾಹಿಂ ಯಾವ ರೀತಿ ಪ್ರಚಾರ ಮಾಡಿ ತಮ್ಮ ಸಮುದಾಯದ ಮತ ಸೆಳೆಯಲು ಸಾಧ್ಯವಾಗುತ್ತೆ ಎಂಬ ಯಕ್ಷಪ್ರಶ್ನೆಯಿದೆ.

ಈ ಹಿಂದೆ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದ ಕುಮಾರಸ್ವಾಮಿ ವಿರುದ್ಧ ದೇವೇಗೌಡರು ಅಸಮಾಧನ ವ್ಯಕ್ತಪಡಿಸಿದ್ದರು. ತಮ್ಮ ನಿರ್ಧಾರದಿಂದ ತಂದೆ ಸಾಕಷ್ಟು ನೊಂದುಕೊಂಡಿದ್ದರು. ಅವರ ವಿರುದ್ಧವಾಗಿ ನಾನು ನಡೆದುಕೊಂಡು ತಪ್ಪು ಮಾಡಿದೆ ಎಂದು ಪದೆಪದೆ ಹೇಳಿದ ಕುಮಾರಸ್ವಾಮಿ ಈಗ ಮತ್ತೊಮ್ಮೆ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಇದಕ್ಕೆ ದೇವೇಗೌಡರ ಒಪ್ಪಿಗೆಯೂ ಇದೆ. ಈ ನಿರ್ಧಾರ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ರಾಜ್ಯ ರಾಜಕೀಯದಲ್ಲಿ ಎಷ್ಟೊಂದು ಅನುಕೂಲವಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!