ಅಂದು ಮೈತ್ರಿ ನಾಯಕರ ಮುನಿಸು.. ಇಂದು ಕೇಸರಿ ಪಡೆಯಲ್ಲಿ ಒಡಕು!

385

ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇದೀಗ ಅಸಮಾಧಾನದ ಹೊಗೆಯಾಡ್ತಿದೆ. ಸಚಿವ ಸ್ಥಾನ ಸಿಗದವರ ಒಂದು ಗುಂಪು ಮತ್ತು ತಮ್ಗೆ ಬೇಕಾದ ಖಾತೆ ಸಿಗದಿರುವುದಕ್ಕೆ ಮುನಿಸಿಕೊಂಡಿರುವವರ ಮತ್ತೊಂದು ಗುಂಪು. ಇದರ ಜೊತೆಗೆ ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದಕ್ಕೆ ಗರಂ ಆಗಿರುವ ಶಾಸಕರ ತಂಡ ಮಗದೊಂದು ಕಡೆ.

ಯಾವುದೇ ಒಂದು ಸರ್ಕಾರ ರಚನೆಯಾದ್ಮೇಲೆ ಮಂತ್ರಿ ಮಂಡಲ, ಖಾತೆ ಹಂಚಿಕೆ ನಡೆಯುವ ಟೈಂನಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸುವುದು ಹೊಸದಲ್ಲ. ತಮ್ಮಗೆ ಸಚಿವ ಸ್ಥಾನಬೇಕಿತ್ತು. ಸಿಕ್ಕಿಲ್ಲ. ಅದಕ್ಕೆ ಅವರು ಕಾರಣ, ಇವರು ಕಾರಣ ಅನ್ನೋ ಮಾತುಗಳು ಕೇಳಿ ಬರ್ತವೆ. ಇದರ ಜೊತೆಗೆ ಮಂತ್ರಿ ಸ್ಥಾನ ಸಿಕ್ಕಮೇಲೆ ನನ್ಗೆ ಸಿಗಬೇಕಾದ ಖಾತೆ ಸಿಗ್ಲಿಲ್ಲ. ಹೀಗಾಗಿ ಬೇಸರವಾಗಿದೆ ಅಂತಾ ಹೇಳುವ ನಾಯಕರು ಸಹ ಇರ್ತಾರೆ. ಇದೀಗ ಆಗ್ತಿರೋದು ಸಹ ಇದೆ.

ಆರ್.ಅಶೋಕ, ಸಿಟಿ ರವಿ, ಶ್ರೀರಾಮುಲು, ಕೆ.ಎಸ್ ಈಶ್ವರಪ್ಪ, ಜಗದೀಶ ಶೆಟ್ಟರ ಸೇರಿದಂತೆ ಕೆಲ ನಾಯಕರು ತಮ್ಗೆ ಸಿಗಬೇಕಾದ ಖಾತೆ ಸಿಕ್ಕಿಲ್ಲ. ತಮ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತು. ಸೋತ ಅಭ್ಯರ್ಥಿ ಲಕ್ಷ್ಮಣ ಸವದಿಗೆ ಡಿಸಿಎಂ ಜೊತೆಗೆ ಹೆಚ್ಚುವರಿಯಾಗಿ ಖಾತೆ ನೀಡಲಾಗಿದೆ ಅನ್ನೋ ಸಿಟ್ಟು ಹೊರ ಹಾಕ್ತಿದ್ದಾರೆ. ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ, ಅರಗ ಶ್ರೀನಿವಾಸಮೂರ್ತಿ, ರೇಣುಕಾಚಾರ್ಯ ಸೇರಿ ಇನ್ನು ಕೆಲವರು ಸಚಿವ ಸ್ಥಾನ ಸಿಗದಿರುವುದಕ್ಕೆ ಗರಂ ಆಗಿದ್ದಾರೆ. ಆದ್ರೆ, ಇದರ ಹಿಂದಿನ ಉದ್ದೇಶ ಬೆಳಗಾವಿಯ ಕಾಂಗ್ರೆಸ್ ಶಾಸಕರ ಸಪೋರ್ಟ್ ಬಿಜೆಪಿಗೆ ಸಿಕ್ಕಿರೋದ್ರಿಂದ, ನಾಳೆ ಅವರನ್ನ ಮತ್ತೆ ಗೆಲ್ಲಿಸಿಕೊಂಡು ಬರಲು ಅನುಕೂಲವಾಗ್ಲಿ ಅನ್ನೋ ದೃಷ್ಟಿಯಿಂದ ಸವದಿಗೆ ಮಣೆ ಹಾಕಲಾಗಿದೆ ಎನ್ನಲಾಗ್ತಿದೆ.

ಗೋವಿಂದ ಕಾರಜೋಳ ಹಾಗೂ ಡಾ.ಅಶ್ವತನಾರಾಯಣ ಅವರ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಮತ್ತು ಎರಡನೇ ಹಂತದ ನಾಯಕರನ್ನ ಬೆಳೆಸುವುದಾಗಿದೆ. ಅಲ್ದೇ, ಉತ್ತರ ಕರ್ನಾಟಕಕ್ಕೆ ಹೆಚ್ಚಿಗೆ ಸಚಿವ ಸ್ಥಾನ ನೀಡದೆ ಇರೋದ್ರಿಂದ ಇಬ್ಬರನ್ನ ಡಿಸಿಎಂ ಮಾಡುವ ಮೂಲಕ ಆಕ್ರೋಶವನ್ನ ಕಡಿಮೆ ಮಾಡುವ ಪ್ರಯತ್ನವಾಗಿದೆ. ಆದ್ರೆ, ಇದಕ್ಕೆ ಬಿಜೆಪಿ ನಾಯಕರು ಸಮಾಧಾನ ಮಾಡಿಕೊಳ್ಳದೆ ತಂತಮ್ಮ ಮುನಿಸನ್ನ ಹೊರ ಹಾಕುತ್ತಿದ್ದಾರೆ. ಇದ್ರಿಂದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಮೈತ್ರಿ ಸರ್ಕಾರ ಪತನವಾಗಲು ಕಾರಣ ಸಹ ಸಚಿವ ಸಂಪುಟ ವಿಸ್ತರಣೆ, ಸರಿಯಾದ ಖಾತೆ ನೀಡದೆ ಇರೋದು, ಹಿರಿಯರನ್ನ ಪರಿಗಣಿಸಿಲ್ಲ ಅನ್ನೋದು. ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲ ಶಾಸಕರು ಸ್ಫೋಟಗೊಳ್ಳಲು ಬಹುಮುಖ್ಯವಾಗಿ ಖಾತೆ ಕ್ಯಾತೆನೆ ಕಾರಣ. ಆ ಸ್ಥಿತಿ ಈಗ ಬಿಎಸ್ವೈ ಸರ್ಕಾರದಲ್ಲಿ ಆಗ್ತಿದೆ. ಒಂದು ವೇಳೆ ಇವರು ಹೀಗೆ ಮಾಡ್ತಿದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ಹುಬ್ಬಳ್ಳಿಯಲ್ಲಿ ಹೇಳಿದಂತೆ ಹೆಚ್ಚು ದಿನ ಈ ಸರ್ಕಾರ ಉಳಿಯುವುದಿಲ್ಲ. ಮಧ್ಯಂತರ ಚುನಾವಣೆ ನಡೆಯವುದು ಫಿಕ್ಸ್ ಆಗಬಹುದು. ಇವರ ಕಿತ್ತಾಟವನ್ನ ಬಿಜೆಪಿ ಹೈಕಮಾಂಡ್ ಹೇಗೆ ಬಗೆಹರಿಸುತ್ತೆ ಅನ್ನೋ ಕುತೂಹಲವಿದೆ.

ನ್ಯೂಸ್ ರೂಮ್




Leave a Reply

Your email address will not be published. Required fields are marked *

error: Content is protected !!