ಬಸ್ ಟಿಕೆಟ್ ದರ 2 ಸಾವಿರಕ್ಕೂ ಹೆಚ್ಚು.. ಇದ್ದು ಇಲ್ಲವಾಗೋ ಸರ್ಕಾರ

219

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಬ್ಬಗಳು ಬಂದರೆ ದೂರದ ಊರಿನಲ್ಲಿರುವ ಜನರು ತಮ್ಮ ತಮ್ಮ ಊರುಗಳಿಗೆ ಹೋಗಲು ಸಜ್ಜಾಗುತ್ತಾರೆ. ಅದರಲ್ಲೂ ಯುಗಾದಿ, ನವರಾತ್ರಿ, ದೀಪಾವಳಿ, ರಂಜಾನ್, ಕ್ರಿಸ್ಮಸ್ ಸೇರಿದಂತೆ ದೊಡ್ಡ ದೊಡ್ಡ ಹಬ್ಬಗಳಿಗೆ ಊರಿಗೆ ತೆರಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್ ಕಂಪನಿಗಳು ಟಿಕೆಟ್ ದರ ಬೇಕಾಬಿಟ್ಟಿಯಾಗಿ ಏರಿಸಿ ಜನರ ದುಡಿಮೆಗೆ ಕತ್ತರಿ ಹಾಕುತ್ತಿವೆ.

ಸಿಲಿಕಾನ್ ಸಿಟಿಯಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಕಂಪನಿ ಬಸ್ ಗಳ ಟಿಕೆಟ್ ದರ ಕೇಳಿ ಶಾಕ್ ಆಗುತ್ತಿದ್ದಾರೆ. ಒಬ್ಬರಿಗೆ ಒಂದು ಬಾರಿ ಪ್ರಯಾಣಕ್ಕೆ 1 ಸಾವಿರದಿಂದ 2 ಸಾವಿರ ಮೇಲ್ಪಟ್ಟು ಟಿಕೆಟ್ ದರ ನಿಗದಿ ಮಾಡಲಾಗಿದೆ. ಕುಟುಂಬ ಸಮೇತರಾಗಿ ಹಬ್ಬಕ್ಕೆ ಬಂದು ವಾಪಸ್ ಆಗಲು 10-15 ಸಾವಿರ ರೂಪಾಯಿ ಬರೀ ಬಸ್ ಟಿಕೆಟ್ ಗಾಗಿ ಖರ್ಚು ಮಾಡಬೇಕಾಗಿದೆ. ಪರ ರಾಜ್ಯಗಳಿಗೆ ಹೋಗುವವರ ಸ್ಥಿತಿ ಕೇಳುವುದೇ ಬೇಡ.

ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿ ಬಾರಿಯೂ ಚರ್ಚೆಯಾಗುತ್ತೆ. ಆದರೆ, ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳು ಸಹ ಗಮನ ಹರಿಸುವುದಿಲ್ಲ. ಯಾಕಂದರೆ ಕೆಲ ಖಾಸಗಿ ಬಸ್ ಕಂಪನಿಗಳು ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನು ಕೆಲವು ರಾಜಕೀಯ ಪಕ್ಷಗಳ ಹಿಂಬಾಲಕರು ಇವೆ. ಇದರಿಂದಾಗಿ ಜನಪರ ಇರಬೇಕಾದ ಸರ್ಕಾರ ಉಳ್ಳವರ ಅಡಿ ಆಳಾಗುತ್ತಿವೆ ಎಂದು ಕಿಡಿ ಕಾರಲಾಗುತ್ತಿದೆ.

ದುಬಾರಿ ಹಣ ಕೊಟ್ಟು ಹೋಗಲಾಗದೆ 10-15 ಗಂಟೆಗಳ ಕಾಲ ಸರ್ಕಾರಿ ಬಸ್, ಟ್ರೇನ್ ಗಳಲ್ಲಿ ಕುಳಿತುಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಸ್ಲೀಪರ್ ಕೋಚ್ ಬಸ್ ಗಳ ವ್ಯವಸ್ಥೆ ಮಾಡುವುದಿಲ್ಲ. ಹೀಗಾಗಿ ಖಾಸಗಿ ಬಸ್ ನವರು ಹಣ ಸುಲಿಗೆ ಮಾಡಿ ದೊಡ್ಡ ಉದ್ಯಮಿ ಆಗದೆ ಏನು ಮಾಡುತ್ತಾರೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!