ಮನುಸ್ಮೃತಿ ಮತ್ತೆ ತರಬೇಕು ಅನ್ನೋ ಶಕ್ತಿಗಳನ್ನು ಮಣಿಸಬೇಕು: ಸಿಎಂ ಸಿದ್ದರಾಮಯ್ಯ

157

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮವನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಆಯೋಜಿಸಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಆದಿಯಾಗಿ ಗಣ್ಯರು ಸಂವಿಧಾನ ಪೀಠಿಕೆ ಓದಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮನು ಸ್ಮೃತಿಯನ್ನು ಮತ್ತೆ ತರಲು ಹವಣಿಸುತ್ತಿರುವ ಶಕ್ತಿಗಳನ್ನು ಮಣಿಸಬೇಕು. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ, ಕೆಲ ಶಕ್ತಿಗಳು ಸಂವಿಧಾನ ನಾಶ ಮಾಡಿ ಮತ್ತೆ ಮನುಸ್ಮೃತಿ ತರಲು ಹೊರಟಿದ್ದು, ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.

ಸಂವಿಧಾನ ಜಾರಿಯಿಂದ ಎಲ್ಲೆಡೆ ಪ್ರಜಾಪ್ರಭುತ್ವ ನೆಲೆಯೂರಿದೆ. ಇದನ್ನು ಅರಿತಾಗ ಸಮ ಸಮಾಜ ನಿರ್ಮಿಸಲು ಸಾಧ್ಯ. ಇಲ್ಲವಾದರೆ ಅಸಮಾನತೆ ಹೋಗಲಾಡಿಸಲು ಕಷ್ಟ. ಶೇಕಡ 95ರಷ್ಟು ಜನರನ್ನು ಗುಲಾಮರಂತೆ ಬದುಕಿಸಬೇಕು ಅನ್ನೋ ಮನುಸ್ಮೃತಿಯನ್ನು ಮತ್ತೆ ತರಲು ಹೊರಟವರನ್ನು ಎಲ್ಲರೂ ಒಂದಾಗಿ ಮಣಿಸಬೇಕು ಎಂದು ಹೇಳಿದರು.

ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಹೆಚ್.ಸಿ ಮಹಾದೇವಪ್ಪ, ಕೆ.ಹೆಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಿಎಂ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೊಯಲ್ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!