ಕೊಳವೆಬಾವಿ ಕೊರೆದ ಏಜೆನ್ಸಿ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ

96

ಪ್ರಜಾಸ್ತ್ರ ಸುದ್ದಿ

ವಿಜಯಪುರ: ತೆರೆದ ಕೊಳವೆಬಾವಿಗಳನ್ನು ಮುಚ್ಚುವಲ್ಲಿ ನಾಗರಿಕರ ಜವಾಬ್ದಾರಿಯೂ ಇರುತ್ತದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಮಗುವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿರುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.

ಸಾತ್ವಿಕ ಸತಿಶ ಮುಜಗೊಂಡ ಮಗುವಿನ ರಕ್ಷಣಾ ಕಾರ್ಯಾಚರಣೆಯಂತೆ ಎಲ್ಲಾ ಕಾರ್ಯಚರಣೆಗಳು ಯಶಸ್ವಿಗೊಳ್ಳುವುದಿಲ್ಲ. ಕೆಲವೇ ಕಲವು ಯಶಸ್ವಿಗೊಳ್ಳುತ್ತವೆ. ಈ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರು ತಾವು ಕೊರಿಸುವ ಕೊಳವೆ ಬಾವಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಜವಾಬ್ದಾರಿಯೂ ಇದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆ ಇದ್ದು, ಇನ್ನು ಮುಂದೆ ಸುತ್ತೋಲೆಯ ಮಾನದಂಡಗಳನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸಲಾಗುವುದು. ಲಚ್ಯಾಣ ಕೊಳವೆಬಾವಿ ಪ್ರಕರಣ ಸಂಬಂಧ ಏಜೆನ್ಸಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಏ.3ರಂದು ಸಂಜೆ 5.30ರ ಸುಮಾರಿಗೆ ಕೊಳವೆ ಬಾವಿಗೆ ಸಿಲುಕಿದ ಮಗುವನ್ನು ಗಮನಿಸಿದ ಪಾಲಕರು ತಕ್ಷಣವೇ ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಅಧಿಕಾರಿ, ಸಿಂಬಂದಿ ಮತ್ತು ಸ್ಥಳಿಯರೊಂದಿಗೆ ಕಾರ್ಯಪ್ರವೃತ್ತರಾಗಿ ಮಗುವನ್ನು ಯಶಸ್ವಿಯಾಗಿ ಸಂರಕ್ಷಿಸಲು ಸಾಧ್ಯವಾಗಿದೆ. ಇದಕ್ಕೆ ಗುಲಬರ್ಗಾದಿಂದ ಎಸ್‌ಡಿಆರ್‌ಎಫ್ ಹಾಗೂ ಹೈದ್ರಾಬಾದನಿಂದ ಎನ್‌ಡಿಆರ್‌ಎಫ್ ತಂಡಗಳು ಬಂದು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿರುತ್ತವೆ.

ಜಿಲ್ಲಾ ಅಗ್ನಿಶಾಮಕ ದಳದ ಸಹಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯರು ಮಗುವಿನ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ನಿಡುತಿದ್ದ ಮಾಹಿತಿಯು ಸಾಕಷ್ಟು ಅನಕೂಲವಗನ್ನು ಒದಗಿಸಿತು. ಪೊಲೀಸ್ ಇಲಾಖೆ ಸೇರಿ 200 ರಿಂದ 300 ಸಿಬ್ಬಂದಿ ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದ್ದಾರೆ. ಭಾಗವಹಿಸಿದವರಿಗೆಲ್ಲರಿಗೂ ಅಭಿನಂದನೆಗಳು ಎಂದರು.

ಜಿಲ್ಲಾ ವೈದ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಮಾತನಾಡಿ, ಕೊಳವೆ ಬಾವಿಯಿಂದ ಮಗುವನ್ನು ತೆಗೆದ ತಕ್ಷಣ ಮಗುವಿನ ಆರೋಗ್ಯ ದೃಷ್ಟಿಯಿಂದ ಪ್ರಥಮ ಚಿಕಿತ್ಸೆಯನ್ನು ಅಂಬೊಲೆನ್ಸ್ನಲ್ಲಿಯೇ ನೀಡಿ ನಂತರ ಇಂಡಿ ತಾಲೂಕಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದಾದ ನಂತರ ಎರಡು ಗಂಟೆಯೊಳಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ, ಹೃದಯ ಪರೀಕ್ಷೆ ಸೇರಿ ಇತರ ಪರೀಕ್ಷೆಗಳನ್ನು ನಡೆಸಿದ್ದು, ಮಗುವಿಗೆ ಯಾವುದೆ ಆರೋಗ್ಯ ಸಮಸ್ಯೆ ಉಂಟಾಗಿರುವದಿಲ್ಲ.  ಇಂದು ಬೆಳಿಗ್ಗೆ ಮಗು ತಾಯಿಯ ಎದೆಹಾಲನ್ನು ಸೇವಿಸಿದ್ದು, ಯಾವುದೆ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ.  ಇನ್ನೆರಡು ದಿನಗಳಲ್ಲಿ ಮಗುವಿನ ಆರೋಗ್ಯ ಗಮನಿಸಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಶಿ ಸೋನಾವಣೆ,  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹಾಗೂ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಇದ್ದರು.




Leave a Reply

Your email address will not be published. Required fields are marked *

error: Content is protected !!