‘ಮಹಾ’ ನೆಲದ ಪಾಲಿ‘ಟ್ರಿಕ್ಸ್’ಗೆ ದಿಗ್ಗಜರೇ ಶೇಕ್.. ‘ಆ’ ಕಾರಣಕ್ಕೆ ಉದ್ಧವ್ ಕನಸು ನುಚ್ಚುನೂರು!

527

ನ್ಯೂಸ್ ಡೆಸ್ಕ್:

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಸಾಕಷ್ಟು ಜನಕ್ಕೆ ಅಚ್ಚರಿ ತಂದಿದೆ. ಕೆಲವರಿಗೆ ಇದು ಕನಸು ಇರಬೇಕು ಅಂದುಕೊಂಡಿದ್ದಾರೆ. ಯಾಕಂದ್ರೆ, ಶುಕ್ರವಾರ ಇಡೀ ದಿನ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ಸರ್ಕಾರ ರಚನೆ ಮಾಡುತ್ತೇವೆ ಅನ್ನೋದರ ಕುರಿತು ಸಭೆ ನಡೆಸಿವೆ. ಮೂರು ಪಕ್ಷಗಳ ಮೈತ್ರಿ ಸರ್ಕಾರದ ಬಗ್ಗೆ ಇಂದು ಅಧಿಕೃತ ಘೋಷಣೆಯಾಗಬೇಕಿತ್ತು. ಆದ್ರೆ, ಇಡೀ ಸೀನ್ ಬೆಳಕಾಗುವಷ್ಟರಲ್ಲಿ ಚೇಂಜ್ ಆಗಿದೆ.

ದೇಶದ ರಾಜಕೀಯ ಇತಿಹಾಸದಲ್ಲಿ ಇಂತಹದೊಂದು ಘಟನೆ ನಡೆದಿರುವುದಕ್ಕೆ ಸಾಧ್ಯವಿಲ್ಲ ಅನಿಸುತ್ತೆ. ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡ ಪಕ್ಷಗಳು ಹೊರತು ಪಡಿಸಿ ಬೇರೆಯೊಂದು ಪಕ್ಷದೊಂದಿಗೆ ಸರ್ಕಾರ ರಚನೆ ಮಾಡಲಾಗಿದೆ. ಇದು ನಿಜಕ್ಕೂ ಬಿಗ್ ಶಾಕ್. ಠಾಕ್ರೆ ಕುಡಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಬೇಕು ಅನ್ನೋ ಕನಸು ಕಾಣ್ತಿದ್ದ ಉದ್ಧವ್ ಗೆ ಇದು ನಿಜಕ್ಕೂ ಮರ್ಮಾಘಾತವೆಂದು ಹೇಳಬಹುದು. ಇದಕ್ಕೆ ಕಾರಣವಾಗಿರೋದು 5 ವರ್ಷ ಶಿವಸೇನೆ ಬಳಿಯೇ ಸಿಎಂ ಸ್ಥಾನ ಇರ್ಲಿ ಅನ್ನೋದು.

ಎಲೆಕ್ಷನ್ ಪೂರ್ವದಲ್ಲಿ ಬಿಜೆಪಿ ಹಾಗೂ ಶಿವಸೇನೆ 50-50 ಸರ್ಕಾರ ರಚನೆ ಬಗ್ಗೆ ಮಾತ್ನಾಡಿಲ್ಲ ಅನ್ನೋದು ಬಿಜೆಪಿ ವಾದ. ಫಲಿತಾಂಶ ಬಂದ್ಮೇಲೆ ಶಿವಸೇನೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತುಕೊಂಡಿತು. ಇದು ಸಾಲದು ಎಂಬಂತೆ ಪಕ್ಷದ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ಹೀನಾಯವಾಗಿ ಬರೆಯಲು ಶುರು ಮಾಡಿತು. ಮೊದಲ ಬಾರಿಗೆ ಶಾಸಕನಾಗಿರುವ ಉದ್ಧವ್ ಪುತ್ರ ಆದಿತ್ಯಗೆ ಸರ್ಕಾರದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕು ಅನ್ನೋ ಡಿಮ್ಯಾಂಡ್ ಇಟ್ಟಿತು. 28 ವರ್ಷದ ಕಿರಿಯ ಶಾಸಕ ಆದಿತ್ಯಗೆ ಪ್ರಾಮುಖ್ಯತೆ ನೀಡಿದ್ರೆ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಗೆ ಹಿನ್ನೆಡೆ ಅನ್ನೋದು ಕೇಸರಿ ನಾಯಕರ ಲೆಕ್ಕಾಚಾರವಾಗಿತ್ತು. ಇದರ ಪರಿಣಾಮ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು.

ಯಾವಾಗ ಬಿಜೆಪಿ ತನ್ನ ಮಾತಿಗೆ ಕಿಮ್ಮತ್ತು ಕೊಡುವುದಿಲ್ಲವೆಂದು ಹೇಳಿತೋ ಆಗ ಶಿವಸೇನೆ ಕೆಂಡ ಕಾರಲು ಶುರು ಮಾಡಿತು. ತತ್ವ ಸಿದ್ಧಾಂತಗಳಲ್ಲಿ ಒಂದೇ ದಾರಿಯಲ್ಲಿದ್ದ ಬಿಜೆಪಿ ಹಾಗೂ ಶಿವಸೇನೆ ನಡುವೆ ಕಂದಕ ದೊಡ್ಡದಾಯ್ತು. ಹೇಗಾದ್ರು ಮಾಡಿ ಬಿಜೆಪಿಗೆ ಮಣ್ಣು ಮುಕ್ಕಿಸಬೇಕೆಂದುಕೊಂಡು ವಿರುದ್ಧ ವಿಚಾರಧಾರೆಗಳನ್ನ ಇಟ್ಟುಕೊಂಡಿರುವ ಎನ್ ಸಿಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಲು ಉದ್ಧವ್ ಠಾಕ್ರೆ ಮುಂದಾದ್ರು. ಬಿಜೆಪಿ ಮಾತ್ರ ಸೈಲೆಂಟ್ ಆಗಿಯೇ ಒಳಗೊಳಗೆ ಕೆಲಸ ಮಾಡಿಕೊಂಡು ಬರಲು ಶುರು ಮಾಡಿತು. ಶಿವಸೇನೆ ಸಂಸದ ಸಂಜಯ ರಾವತ್ ಮೇಲಿಂದ ಮೇಲೆ ಹೇಳಿಕೆಗಳನ್ನ ಕೊಡ್ತಿದ್ರೂ ನಮೋ-ಶಾ ಜೋಡಿ ಗಪ್ ಚುಪ್ ಇತ್ತು. ಅವರಿಬ್ಬರ ಸೈಲೆಂಟ್ ರಣತಂತ್ರ ಎಂದೂ ಮರೆಯದ ಹಾಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಚಾಟಿ ಏಟು ನೀಡಿದೆ.

ಇನ್ನು ಕಾಂಗ್ರೆಸ್ ಆಟಕ್ಕುಂಟು ಲೆಕ್ಕಿಕ್ಕಲ ಅನ್ನೋ ಹಾಗಾಗಿದೆ. ಬಿಜೆಪಿ ಜೊತೆ ಎಂದೂ ಕೈ ಜೋಡಿಸುವುದಿಲ್ಲ. ಶಿವಸೇನೆ ಜೊತೆ ಮೈತ್ರಿ ಬೆಳೆಸಿದ್ರೆ ಅಳಿಯ ಅಲ್ಲ ಮಗಳ ಗಂಡ ಅನ್ನೋ ಹಾಗೆ ಇದು. ಶರದ್ ಪವಾರ ನೋ ಎಂದ ಟೀಂ ಜೊತೆ ಅಜಿತ ಪವಾರ ಕೈ ಜೋಡಿಸಿದ್ದಾರೆ.

ಬಿಜೆಪಿಯ ಐಡಾಲಜಿ ಏನು ಇವೆಯೋ ಶಿವಸೇನೆಯ ಐಡಾಲಜಿ ಬಹುತೇಕ ಒಂದೇಯಾಗಿವೆ. ಹೀಗಾಗಿಯೇ ಈ ಎರಡು ಪಕ್ಷಗಳು ದಶಕಗಳಿಂದ ಜೊತೆಯಾಗಿದ್ವು. ಆದ್ರೆ, ಎನ್ ಸಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಏನ್ ಮಾಡಬೇಕು ಅನ್ನೋ ಸ್ಥಿತಿಯಲ್ಲಿತ್ತು. ಹೀಗಾಗಿ ಬಹುಶಃ ಎನ್ ಸಿಪಿ ಬಿಜೆಪಿ ಜೊತೆ ಹೋಗಲು ಕಾಂಗ್ರೆಸ್ ಸಹ ಗ್ರೀನ್ ಸಿಗ್ನಲ್ ನೀಡರಲುಬಹುದು. ಇಲ್ಲದೇ ಹೋದ್ರೆ ಇಷ್ಟೊಂದು ಅಚ್ಚರಿಯ ಬೆಳವಣಿಗೆ ನಡೆಯೋದು ಕಷ್ಟಸಾಧ್ಯ.

288 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 105ರಲ್ಲಿ ಗೆದ್ದಿದೆ. ಶಿವಸೇನೆ 56, ಎನ್ ಸಿಪಿ 54 ಹಾಗೂ ಕಾಂಗ್ರೆಸ್ 44 ಹಾಗೂ ಎಐಎಂಐಎಂ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.




Leave a Reply

Your email address will not be published. Required fields are marked *

error: Content is protected !!