‘ಮೌನ್ ಕೀ ಬಾತ್’ ಕಹಾನಿ…

412

ಅದ್ಭುತ ಮಾತುಗಾರ, ವಾಗ್ಮಿ, ವಿರೋಧ ಪಕ್ಷಗಳ ವಿರುದ್ಧ ಗಂಟೆಗಟ್ಟಲೆ ಭಾಷಣ ಮಾಡಿ, ಮಾತಿನಲ್ಲಿಯೇ ತೀವಿಯುವ ಪ್ರಧಾನಿ. ಆದರೆ, ನಿನ್ನೆ ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮೌನಕ್ಕೆ ಶರಣಾಗಿದ್ದರು. ಅದ್ಯಾಕೆ ಅನ್ನೋದರ ಸ್ಟೋರಿ ಇಲ್ಲಿದೆ..

ಕಡೆಗೂ ಪ್ರಧಾನಿ ಮೋದಿ ತಮ್ಮ ಐದು ವರ್ಷದ ಆಡಳಿತ ಅವಧಿಯ ಮೊದಲ ಹಾಗೂ ಕೊನೆಯ ಮಾಧ್ಯಮಗೋಷ್ಠಿ ನಡೆಸಿದರು.! ಈ ಮೂಲಕ ದೇಶದ ಜನತೆಗೆ ಧನ್ಯವಾದಗಳನ್ನು ತಿಳಿಸಿದರು. ಇಲ್ಲಿ ಬರೀ ಪ್ರಧಾನಿ ಮಾತ್ರ ಇರ್ಲಿಲ್ಲ. ಇವರ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಇದ್ದರು. ಇದೆಲ್ಲ ಹಳೆಯ ವಿಷಯ ಅಲ್ವಾ ಅಂತಾ ನೀವು ಕೇಳಬಹುದು. ಹೌದು, ಇದು ಹಳೆಯ ವಿಷಯ. ಈ ಹಳೆತರಲ್ಲಿಯೇ ಒಂದಿಷ್ಟು ಅಂಶಗಳು ಅಡಗಿವೆ.

ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು, ಪ್ರಧಾನಿ ಮೋದಿ ಸೇರಿದಂತೆ ಕೇಸರಿ ಪಡೆಯ ನಾಯಕರು ಹಾಗೂ ಅವರ ಬೆಂಬಲಿಗರು ಮೌನಿ ಬಾಬಾ ಅಂತಾ ಟೀಕೆ ಮಾಡುತ್ತಿದ್ದರು. ಮನಮಹೋನ ಸಿಂಗ್, ಸೋನಿಯಾ ಅವರ ಕೀ ಗೊಂಬೆ. ಅವರು ಹೇಳಿದಾಗ ಮಾತ್ರ ಮಾತ್ನಾಡ್ತಾರೆ ಅಂತಾ ವಾಗ್ದಾಳಿ ನಡೆಸ್ತಿದ್ದಿದ್ದು ನಿಮಗೆ ಗೊತ್ತೆ ಇದೆ. ಹೀಗೆ ಹೇಳಿದ ಪ್ರಧಾನಿ ಮೋದಿ, ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತುಟಿ ಬಿಚ್ಚಲಿಲ್ಲ.

ರ್ಯಾಲಿಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಭರ್ಜರಿಯಾಗಿ ವಾಗ್ಭಾಣ ಬೀಡುವ ಪ್ರಧಾನಿ ಮೋದಿ ಮೌನದ ಹಿಂದೆ ಹತ್ತು ಹಲವು ಕಾರಣಗಳಿವೆ. ಇಲ್ಲಿ ಮನ್ ಕೀ ಬಾತ್ ರೀತಿ ಮಾತ್ನಾಡಲು ಆಗೋದಿಲ್ಲ. ಯಾಕಂದರೆ, ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಮುಜಕರಕ್ಕೆ ಸಿಲುಕಿಸುವ ಅನೇಕ ಘಟನೆಗಳು ನಡೆದಿವೆ. ಇವುಗಳಿಗೆ ಪತ್ರಕರ್ತರು ಕೇಳುವ ಪ್ರಶ್ನೆಗೆ ಪಿಎಂ ಉತ್ತರಿಸಬೇಕಾಗುತ್ತೆ. ಆದರೆ, ಅವರು ಹಾಗೇ ಮಾಡದೇ ತಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೆಗಲ ಮೇಲೆ ಕೈ ಇಟ್ಟರು. ಇದರ ಪರಿಣಾಮ ಸಿದ್ಧ ಪ್ರಶ್ನೆಗಳಿಗೆ! ಅಮಿತ್ ಶಾ ಅವರು ಉತ್ತರಿಸಿದ್ದಾರೆ.

ರಫೇಲ್ ಹಗರಣ, ಏರ್ ಸ್ಟ್ರೈಕ್ ವಿಚಾರ, ಭಾರತಕ್ಕೆ ಇಂಟರ್ ನೆಟ್ ಬರುವ ಮೊದ್ಲೇ ಡಿಜಿಟಲ್ ಫೋಟ್ ಹಾಗೂ ಮೇಲ್ ಮಾಡಿದ್ದೆ ಅಂತಾ ಹೇಳಿದ ಮಾತು. ಇಷ್ಟು ಸಾಲದು ಅಂತಾ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ನೀಡುತ್ತಿರುವ ಹೇಳಿಕೆಗಳು. ಇತ್ತ ಸಂಸದ ನಳೀನ್ ಕುಮಾರ್ ಕಟೀಲ್ ಟ್ವೀಟ್ ಇವರಿಗೆ ಸಾಥ್ ನೀಡುವ ರೀತಿಯಲ್ಲಿ ಹಾಗೂ ಸದಾ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಡವಟ್ಟುಗಳಿಗೆ ಉತ್ತರಿಸಬೇಕಿತ್ತು. ಇದ್ಯಾವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಹೀಗಾಗಿ ಮೌನ್ ಕೀ ಬಾತ್ ಮಾಧ್ಯಮಗೋಷ್ಠಿ ಆಗಿದೆ ಅಂತಾ ಹೇಳಲಾಗ್ತಿದೆ. ಅಲ್ದೇ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಂದಿನ ಸಾರಿಯಾದರೂ ಅಮಿತ್ ಶಾ ಮೋದಿಗೆ ಮಾತ್ನಾಡಲು ಅವಕಾಶ ಕೊಡಬೇಕು ಅನ್ನೋ ಮೂಲಕ ಕಾಲೆಳೆದಿದ್ದಾರೆ.

ಇದೆಲ್ಲದರ ನಡುವೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಬಿಜೆಪಿ ನಾಯಕರು ಗೋಡ್ಸೆ ಪರ ನೀಡ್ತಿರುವ ಹೇಳಿಕೆಯಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ವಿಚಾರದಲ್ಲಿ ನೀಡುತ್ತಿರುವ ಅತ್ಯಂತ ಕೀಳು ಮಟ್ಟದ ಹೇಳಿಕೆಯಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್, ಇಂದು ರಾಜ್ಯದಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ.


TAG


Leave a Reply

Your email address will not be published. Required fields are marked *

error: Content is protected !!