ರಾಮದುರ್ಗ ಅಪಘಾತ: ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

222

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಮೃತರ ಗ್ರಾಮವಾದ ಹುಲಕುಂದ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಶುಕ್ರವಾರ ಬನದ ಹುಣ್ಣಿಮೆ ನಿಮಿತ್ತ ಸವದತ್ತಿ ಯಲ್ಲಮ್ಮನ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಾಗವಹಿಸಲು ಉತ್ತರ ಕರ್ನಾಟಕ ಭಾಗದ ಭಕ್ತರು ಸೇರಿ ಹೊರ ರಾಜ್ಯದ ಭಕ್ತರು ಸಹ ಆಗಮಿಸುತ್ತಾರೆ. ಹೀಗಾಗಿ ಬುಧವಾರ ಸಂಜೆ ಬುಲೆರೊ ಗೂಡ್ಸ್ ವಾಹನದಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಹೊರಟಿದ್ದರು.

ರಾತ್ರಿ ಸುಮಾರು 10ರ ಸಮಯದಲ್ಲಿ ಕಟಕೋಳ ಹತ್ತಿರ ಗಾಡಿ ನಿಲ್ಲಿಸಿ ಊಟ ಮಾಡಿದ್ದಾರೆ. ಸ್ವಲ್ಪ ವಿಶ್ರಾಂತಿ ಮಾಡಿ ಮತ್ತೆ ಪ್ರಯಾಣ ಮುಂದುವರೆಸಿದ್ದಾರೆ. ಹೀಗಾಗಿ ಸಾಗಿದ 7 ಕಿಲೋ ಮೀಟರ್ ನಲ್ಲಿಯೇ ಅಪಘಾತ ಸಂಭವಿಸಿದೆ. ಚುಂಚನೂರ ಗ್ರಾಮದ ಹತ್ತಿರದ ಹದ್ದಿಯ ವಿಠ್ಠಲನ ದೇವಸ್ಥಾನದ ಹತ್ತಿರ ಬಲಕ್ಕೆ ಸಣ್ಣದೊಂದು ತಿರುವು ಇದೆ. ಆದರೆ, ಅಲ್ಲಿ ಗಾಡಿ ತಿರುವು ಪಡೆಯದೆ ಸೀದಾ ಮರವೊಂದಕ್ಕೆ ಹೋಗಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಚಾಲಕ ಪಾರಾಗಿದ್ದಾನೆ. ಉಳಿದಂತೆ ಐವರು ಮಹಿಳೆಯರು ಸೇರಿ 6 ಜನರು ಮೃತಪಟ್ಟಿದ್ದಾರೆ. 16 ಜನರು ಗಾಯಗೊಂಡಿದ್ದಾರೆ. ಮೂರು ದಿನ ಸವದತ್ತಿಯಲ್ಲಿ ಉಳಿದು ಜಾತ್ರೆ ಮಾಡಬೇಕು ಎಂದುಕೊಂಡಿದ್ದ ಭಕ್ತರ ಮನೆಯಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ.




Leave a Reply

Your email address will not be published. Required fields are marked *

error: Content is protected !!