1 ಶಾಲೆ.. 1 ಶಿಕ್ಷಕ.. 1-5ನೇ ತರಗತಿ.. 31 ವಿದ್ಯಾರ್ಥಿಗಳು.. ಹೆರಿಗೆ ಮತ್ತು ರಜೆ…

1009

ಯಾದಗಿರಿ: ಪತ್ನಿಗೆ ಹೆರಿಗೆಯಾದ ಕಾರಣಕ್ಕೆ ಶಿಕ್ಷಕರೊಬ್ಬರು ಪಿತೃತ್ವ ರಜೆ ಮೇಲೆ ಊರಿಗೆ ತೆರಳಿದ್ದಾರೆ. ಇದ್ರಿಂದಾಗಿ ಕಳೆದ 12 ದಿನಗಳಿಂದ ಶಾಲೆಗೆ ಬೀಗ ಹಾಕಲಾಗಿದೆ. ಇದು ನಿಮ್ಗೆ ವಿಚಿತ್ರ ಅನಿಸಿದ್ರೂ ಸತ್ಯ ಮತ್ತು ನಮ್ಮ ಸರ್ಕಾರದ ಶಿಕ್ಷಣ ವ್ಯವಸ್ಥೆಯ ದುಸ್ಥಿತಿ.

ಯಾದಗಿರಿ ತಾಲೂಕಿನ ಥಾನುನಾಯಕ ತಾಂಡದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಿದು. ಇಲ್ಲಿ 1 ರಿಂದ 5ನೇ ತರಗತಿವರೆಗೂ ಓದುವ 31 ಮಕ್ಕಳಿದ್ದಾರೆ. ಇಲ್ಲಿರೋದು ಕೇವಲ ಒಬ್ಬ ಶಿಕ್ಷಕರು ಮಾತ್ರ. ಶಿಕ್ಷಕ ಸಣಮಿರ ಶರಣಪ್ಪ ಅವರ ಪತ್ನಿಗೆ ಜೂನ್ 23 ರಂದು ಹೆರಿಗೆಯಾಗಿದೆ. ಜೂನ್ 24ರಿಂದ 15 ದಿನಗಳ ಕಾಲ ಪಿತೃತ್ವದ ರಜೆ ಕೇಳಿ ಬಿಇಒಗೆ ಪತ್ರ ಬರೆದು ಹೋಗಿದ್ದಾರೆ. ಇದ್ರಿಂದಾಗಿ ಕಳೆದ 12 ದಿನಗಳಿಂದ ಶಾಲೆಗೆ ಬೀಗಿ ಬಿದ್ದಿದೆ. ಮಕ್ಕಳು ದಿನಾ ಬಂದು ಹೊರಗೆ ಕುಳಿತುಕೊಂಡು ಹೋಗುವ ಸ್ಥಿತಿ.

ಈ ಶಾಲೆಯ ಸ್ಥಿತಿಯಿಂದಾಗಿ ತಾಂಡಾದ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗ್ತಿಲ್ಲ. ಶಿಕ್ಷಕರ ರಜೆಯಿಂದಾಗಿ ಮತ್ತೊಬ್ಬರನ್ನ ನೇಮಿಸಲಾಗಿದೆ ಅಂತಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳ್ತಿದ್ದಾರಂತೆ. ಆದ್ರೆ, ಯಾವ ಶಿಕ್ಷಕರು ಇಲ್ಲಿಗೆ ಬಂದಿಲ್ಲವಂತೆ. ಹೀಗಾಗಿ ಮಕ್ಕಳ ಜೊತೆ ಪೋಷಕರು ಶಾಲೆಗೆ ಬಂದು ಹೋಗ್ತಿದ್ದಾರೆ.

 1 ರಿಂದ 5ನೇ ತರಗತಿ ಮಕ್ಕಳಿಗೆ ಒಬ್ಬ ಶಿಕ್ಷಕ ಎಲ್ಲ ವಿಷಯಗಳನ್ನ ಹೇಗೆ ಹೇಳಲು ಸಾಧ್ಯ. ಕೇವಲ 31 ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಹೇಳಲು ಸಾಧ್ಯವೆಂದಾದ್ರೆ, ಗುಣಮಟ್ಟದ ಶಿಕ್ಷಣ ಸಿಗುತ್ತಾ? ವಿಷಯವಾರು ಪರಿಣಿತಿ ಪಡೆದ ಶಿಕ್ಷಕರು ಆಯಾ ವಿಷಯ ಹೇಳುವುದಕ್ಕೂ, ಒಬ್ಬರು ಎಲ್ಲಾ ವಿಷಯ ಹೇಳುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಅಲ್ವೆ. ಸರ್ಕಾರ ಇಂಗ್ಲಿಷ್ ಶಿಕ್ಷಣ ಶುರು ಮಾಡುವ ಬದ್ಲು, ಕನ್ನಡ ಶಾಲೆಗಳ ದುಸ್ಥಿತಿ ಬಗೆಹರಿಸಬೇಕಿದೆ.

ಸರ್ಕಾರಿ ನೌಕರಿ ಬಯಸುವವರು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕು. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕು ಸೇರಿದಂತೆ ಹಲವು ಕ್ರಾಂತಿಕಾರಕ ಹೆಜ್ಜೆಗಳನ್ನ ಇಟ್ಟಾಗ ಬದಲಾವಣೆ ಸಾಧ್ಯ. ಇಲ್ದೆ ಹೋದ್ರೆ, ಎಲ್ಲರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಾರೆ. ನಮ್ಮ ಮಕ್ಕಳು ಓದಲಿ ಅಂತಾ ಸರ್ಕಾರಿ ಶಾಲೆ ಶಿಕ್ಷಕರೇ ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಬಿಟ್ಟು ಬರ್ತಿರುವಾಗ, ಬಡ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ತೆಗೆದುಕೊಳ್ಳುವವರು ಯಾರು?




Leave a Reply

Your email address will not be published. Required fields are marked *

error: Content is protected !!