ಡಿ.12ರಿಂದ ಸಿಂದಗಿಯಲ್ಲಿ ಕುಸ್ತಿ ಕಾಳಗ

284

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸಾತವೀರೇಶ್ವರ ಸಭಾ ಭವನದಲ್ಲಿ ಡಿಸೆಂಬರ್ 12 ಹಾಗೂ 13ರಂದು ಎರಡು ದಿನಗಳ ಕಾಲ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು, ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಆರ್.ಡಿ ಪಾಟೀಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಹೇಳಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜಿ.ಪಿ ಪೋರವಾಲ ಕಲಾ, ವಾಣಿಜ್ಯ ಕಾಲೇಜು ಹಾಗೂ ವಿ.ವಿ ಸಾಲಿಮಠ ವಿಜ್ಞಾನ ಕಾಲೇಜು ವತಿಯಿಂದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಸೇರಿ 4 ವಲಯದಲ್ಲಿ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಗಳು ನಡೆಯಲಿವೆ. 55 ಕೆಜಿಯಿಂದ 120 ಕೆಜಿವರೆಗೂ ಸುಮಾರು 150 ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಫ್ರೀ ಸ್ಟೈಲ್, ಗ್ರೀಕೋ, ರೋಮನ್ ಶೈಲಿಯಲ್ಲಿ ಮ್ಯಾಟ್ ಮೇಲೆ ಕುಸ್ತಿ ನಡೆಯಲಿದೆ. ಮಹಿಳೆಯರಿಗೆ ಫ್ರೀ ಸ್ಟೈಲ್ ನಲ್ಲಿ ಮಾತ್ರ ಸ್ಪರ್ಧೆ ಇರಲಿದೆ. 8 ಜನ ನುರಿತ ನಿರ್ಣಾಯಕರು ಭಾಗವಹಿಸಲಿದ್ದಾರೆ. ಆಯ್ಕೆ ಸಮಿತಿಯಿಂದ ಮೂವರು ಬರಲಿದ್ದಾರೆ. ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಕುಸ್ತಿ ನಡೆಯಲಿದೆ. ಹಲವು ಗಣ್ಯರ ಸಮ್ಮುಖದಲ್ಲಿ ಡಿಸೆಂಬರ್ 12ರ ಸಂಜೆ 4.30ಕ್ಕೆ ಕ್ರೀಡಾ ಕೂಟ ಉದ್ಘಾಟನೆಯಾಗಲಿದೆ ಎಂದರು.

ಕಾಲೇಜು ಆಡಳಿತಾಧಿಕಾರಿ ಬಿ.ಜಿ ಮಠ ಮಾತನಾಡಿ, ಕುಸ್ತಿ ಇಂದು ಕಣ್ಮರೆಯಾಗುತ್ತಿರುವ ದೇಸಿ ಕ್ರೀಡೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾವಳಿ ನಿಜಕ್ಕೂ ಖುಷಿಯ ಸಂಗತಿ ಎಂದರು. ಪ್ರಾಚಾರ್ಯ ಡಿ.ಎಂ ಪಾಟೀಲ ಮಾತನಾಡಿದರು.

ಈ ವೇಳೆ ಜಮಖಾನಾ ಕಾರ್ಯದರ್ಶಿ ಎಂ.ಜೆ ಸಂಕಪಾಲ್, ಬಿ.ಎಡ್ ಕಾಲೇಜು ಪ್ರಾಚಾರ್ಯ ಶರಣು ಜೋಗೂರು, ಬಿಎಸ್ ಡಬ್ಲು ಕಾಲೇಜಿನ ಪ್ರಾಚಾರ್ಯ ಶಿವಮಹಾಂತ ಪೂಜಾರಿ ಸೇರಿ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!