ಉತ್ತರ ಪ್ರದೇಶದ ಹುಡುಗಿ ಕನ್ನಡತಿಯಾಗಿದ್ದು..

290

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದ ನಟಿ ಪೂಜಾ ಗಾಂಧಿ ನವೆಂಬರ್ 29ರ ಸಂಜೆ ವಿಜಯ್ ಘೋರ್ಪಡೆಯವರ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ವಿವಾಹ ಮಾಡಿಕೊಂಡರು. ಈ ಮೂಲಕ ಇತರರಿಗೆ ಮಾದರಿಯಾದರು.

ಚಿತ್ರರಂಗದವರ ಮದುವೆ ಅಂದರೆ ವೈಭವ, ಆಡಂಬರ, ವಿಜೃಂಭಣೆಗೆ ಏನೂ ಕಡಿಮೆ ಇರುವುದಿಲ್ಲ. ಆದರೆ, ನಟಿ ಪೂಜಾ ಗಾಂಧಿ ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಯಾವುದೇ ರೀತಿಯ ಶಾಸ್ತ್ರ ಸಂಪ್ರದಾಯವಿಲ್ಲದೆ ಅತ್ಯಂತ ಸರಳವಾದ ಮಂತ್ರ ಮಾಂಗಲ್ಯದ ಮದುವೆಯಾಗುವುದರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟರು. ಉತ್ತರ ಪ್ರದೇಶದ ಮೀರತ್ ಮೂಲದ ಪೂಜಾ ಗಾಂಧಿ ಅಪ್ಪಟ ಕನ್ನಡತಿಯಾಗಿದ್ದಾರೆ.

ಪಂಜಾಬಿ ಸಂಪ್ರದಾಯದ ಪೂಜಾ ಗಾಂಧಿ ಬೆಳೆದಿದ್ದು ದೆಹಲಿಯಲ್ಲಿ. ಟಿವಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾದರು. 2001ರಲ್ಲಿ ಕತ್ರೊಂ ಕೀ ಕಿಲಾಡಿ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ. 2003ರಲ್ಲಿ ಬೆಂಗಾಲಿ, 2006ರಲ್ಲಿ ತಮಿಳು ಸಿನಿಮಾದಲ್ಲಿ ನಟಿಸಿದರು. ಮುಂದೆ 2006ರಲ್ಲಿ ಬಂದ ಕನ್ನಡದ ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿಯಾದರು. ಈ ಚಿತ್ರ ಬ್ಲಾಕ್ ಬ್ಲಸ್ಟರ್ ಆಯಿತು. ಅಂದು 75 ಕೋಟಿ ಗಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಯಿತು.

ಮುಂದೆ ಕನ್ನಡದ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಕೆಜೆಪಿ ಮೂಲಕ ರಾಜಕೀಯ ಪ್ರವೇಶಿಸಿದರು. ಆದರೆ, 2013ರಲ್ಲಿ ಬಿಎಸ್ಆರ್ ಪಕ್ಷದಿಂದ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಮುಂದೆ ಜೆಡಿಎಸ್ ಸೇರ್ಪಡೆಯಾದರು. ಸಿನಿಮಾ ನಿರ್ಮಾಣ, ಟೆಲಿವಿಷನ್ ಶೋಗಳಲ್ಲಿ ಸಹ ಕಾಣಿಸಿಕೊಂಡರು. ಹೀಗೆ ಸಿನಿ ಕರಿಯರ್ ನಲ್ಲಿ ಬೆಳೆದ ನಟಿ ಪೂಜಾ ಗಾಂಧಿ ಕಳೆದ ಎರಡ್ಮೂರು ವರ್ಷಗಳ ಹಿಂದೆ ಕನ್ನಡ ಕಲಿಕೆ ಪ್ರಾರಂಭಿಸಿದರು. ಈಗ ಸ್ಪಷ್ಟವಾಗಿ ಕನ್ನಡ ಮಾತನಾಡುವುದು ಮಾತ್ರವಲ್ಲ ಓದುವುದು, ಬರೆಯುವುದನ್ನು ಸಹ ಮಾಡುತ್ತಾರೆ. ತಾವೇ ಬರೆದ ಮದುವೆ ಪತ್ರದ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಹಾಕಿಸಿ ಮಾಧ್ಯಮದವರಿಗೆ ನೀಡಿದರು.

ಉತ್ತರ ಪ್ರದೇಶದ ಪಂಜಾಬಿ ಕುಟುಂಬದ ಹುಡುಗಿ ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡು ಅಪ್ಪಟ ಕನ್ನಡತಿಯಾಗಿ, ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ಕುವೆಂಪು ಅವರ ಆಶಯದಂತೆ ಮದುವೆಯಾಗಿದ್ದು ನಿಜಕ್ಕೂ ಮೆಚ್ಚುವಂತಹ ಕೆಲಸ. ಕುವೆಂಪು ಸಮಗ್ರ ಸಾಹಿತ್ಯವನ್ನು ಓದಿ, ಅವರ ಬಗ್ಗೆ ನಿರರ್ಗಳವಾಗಿ ಭಾಷಣ ಮಾಡುವ, ಅವರ ಕುರಿತು ಸಾಹಿತ್ಯ ರಚನೆ ಮಾಡುವ ಅದೆಷ್ಟೋ ಹಿರಿಯ, ಯುವ ಸಾಹಿತಿಗಳು ಸಹ ಮಂತ್ರ ಮಾಂಗಲ್ಯ ಮದುವೆಯಿಂದ ದೂರ ಉಳಿದರು. ಆದರೆ, ಹೆಸರು, ಕೀರ್ತಿ, ಐಷಾರಾಮಿ ಬದುಕು ಎಲ್ಲವನ್ನೂ ಹೊಂದಿದ ನಟಿ ಪೂಜಾ ಗಾಂಧಿ ನಡೆ ನಿಜಕ್ಕೂ ಮಾದರಿ. ಚಿತ್ರರಂಗದಲ್ಲಿ ಅದೆಷ್ಟು ಜನರು ಇದನ್ನು ಅನುಸರಿಸುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!