ಹಣಕಾಸು ಸಚಿವರ ವ್ಯಾಪ್ತಿಗೆ ಬರುವ ಇಡಿ ಹಿನ್ನೆಲೆ ಏನು?

328

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವುದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ವಿಚಾರ ಹಾಗು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಇಡಿ ನಡೆಸುತ್ತಿರುವ ವಿಚಾರಣೆ. ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶಪೂರ್ವಕವಾಗಿ ಕೇಂದ್ರ ಬಿಜೆಪಿ ಸರ್ಕಾರ ಇಡಿ ಅನ್ನೋ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಎಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ.

ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಇಡಿ(ಜಾರಿ ನಿರ್ದೇಶನಾಲಯ) ಬಳಸಿಕೊಂಡು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೆ ಅನ್ನೋ ಮಾತು ಕೇಳಿ ಬರುತ್ತೆ. ಹಾಗಾದರೆ, ಇಡಿಗೆ ತನ್ನದೆಯಾದ ಸ್ವತಂತ್ರ ಅಧಿಕಾರ ಇಲ್ಲವೇ? ಇದನ್ನು ಕಂಟ್ರೋಲ್ ಮಾಡೋದು ಯಾರು ಅನ್ನೋ ಪ್ರಶ್ನೆ ಸಾಮಾನ್ಯ ಜನರದ್ದು.

ಜಾರಿ ನಿರ್ದೇಶನಾಲಯದ ಹಿನ್ನೆಲೆ:

ಇಡಿ ಹುಟ್ಟು ಕೊಂಡಿದ್ದು ಮೇ 1, 1956ರಲ್ಲಿ. ಅಂದರೆ 66 ವರ್ಷಗಳ ಹಿಂದೆ ಇದರ ಜನನವಾಯಿತು. ಇದೊಂದು ಕಾನೂನು ಜಾರಿ ಹಾಗೂ ಆರ್ಥಿಕ ಗುಪ್ತಚರ ಸಂಸ್ಥೆಯಾಗಿದೆ. ದೇಶದಲ್ಲಿ ಆರ್ಥಿಕ ಕಾನೂನುಗಳನ್ನು ಜಾರಿಗೊಳಿಸಲು ಹಾಗೂ ಆರ್ಥಿಕ ಅಪರಾಧಗಳನ್ನು ತಡೆಗಟ್ಟುವುದು ಇದರ ಕೆಲಸ. ಇದರಲ್ಲಿ ಭಾರತೀಯ ಕಂದಾಯ ಇಲಾಖೆ, ಭಾರತೀಯ ಪೊಲೀಸ್ ಇಲಾಖೆ ಹಾಗೂ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಇರುತ್ತಾರೆ.

ಇಡಿ 2 ಪ್ರಮುಖ ಉದ್ದೇಶ:

ಇಡಿಯ ಪ್ರಮುಖ ಉದ್ದೇಶಗಳು ಎರಡು. 1. ವಿದೇಶಿ ವಿನಿಮಯ ಕಾಯ್ದೆ 1999 ಹಾಗೂ 2. ಹಣ ವರ್ಗಾವಣೆ ಕಾಯ್ದೆ 2002. ಈ ಮೂಲಕ ಅಕ್ರಮ ಆರ್ಥಿಕ ಮೂಲ, ಹಣ ವರ್ಗಾವಣೆ, ವಿದೇಶಿ ಹಣಕಾಸಿನ ವ್ಯವಹಾರ. ಇವುಗಳಲ್ಲಿ ನಡೆಯುವ ಅಕ್ರಮ ವ್ಯವಹಾರದ ಮೂಲ ಪತ್ತೆ ಹೆಚ್ಚಿ, ಅಂತವರಿಗೆ ಶಿಕ್ಷೆ ಕೊಡುವುದು. ಆದರೆ, ಇದು ಪಾರದರ್ಶಕತೆಯಿಂದ ಕೂಡಿದೆಯಾ ಅಂದರೆ ಇಲ್ಲ ಅನ್ನೋ ಉತ್ತರ ಬರುತ್ತೆ.

ಇಡಿ ಕಚೇರಿಗಳು:

ನವ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ಇದೆ. ಮುಂಬೈ, ಚೆನ್ನೈ, ಕೊಲ್ಕತ್ತಾ, ದೆಹಲಿ, ಚಂಡೀಗಢದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಬೆಂಗಳೂರು, ಕೊಚ್ಚಿ, ಚೆನ್ನೈ, ದೆಹಲಿ, ಹೈದ್ರಾಬಾದ್, ಗೊಹಾಟಿ, ಜೈಪುರ್, ಲಖ್ನೋ, ಶ್ರೀನಗರ, ಪಾಟ್ನಾ, ಜಲಂದರ್, ಮುಂಬೈ, ಕೊಲ್ಕತ್ತಾ, ಚಂಡೀಗಢ, ಪಣಜಿಯಲ್ಲಿ ಝೋನಲ್ ಕಚೇರಿಗಳಿವೆ. ಇದರ ಜೊತೆಗೆ ಸಬ್ ಝೋನಲ್ ಕಚೇರಿಗಳು ಸಹ ಇವೆ.

ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿ:

ಇಡಿ ಅಧಿಕಾರಿಗಳಿಂದ ದಾಳಿ, ವಿಚಾರಣೆ ಅನ್ನೋ ವಿಚಾರ ಬಂದಾಗ ಯಾಕೆ ರಾಜಕೀಯ ಪಕ್ಷಗಳ ಕೂಗಾಟ, ಹಾರಾಟ, ಪ್ರತಿಭಟನೆಗಳು ಆಗುತ್ತವೆ ಅಂದರೆ, ಇಡಿ ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತೆ. ಕೇಂದ್ರ ವಿತ್ ಸಚಿವರು ಇದರ ಮುಖ್ಯಸ್ಥರು. ಸಧ್ಯ ಇರೋದು ನಿರ್ಮಲಾ ಸೀತಾರಾಮನ್. ವಿತ್ ಸಚಿವರ ಅಧೀನದಲ್ಲಿ ಇಡಿ ಬರುವುದರಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು, ವಿಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಲಾಗುತ್ತೆ. ವಿಚಾರಣೆ, ಬಂಧನ ಅನ್ನೋ ಅಸ್ತ್ರದ ಮೂಲಕ ಅವರನ್ನು ಕಂಟ್ರೋಲ್ ಮಾಡುವ ಕೆಲಸ ಮಾಡಲಾಗುತ್ತೆ ಅನ್ನೋ ಮಾತುಗಳ ಕೇಳಿ ಬರುತ್ತವೆ. ಇದನ್ನು ಸುಳ್ಳು ಎಂದು ಹೇಳಲಾಗದು. ಯಾಕಂದರೆ, ಕೇಂದ್ರದಲ್ಲಿ ಯಾವ ಪಕ್ಷ ಆಡಳಿತದಲ್ಲಿ ಇರುತ್ತದೆಯೋ ಆಗ ವಿರೋಧ ಪಕ್ಷಗಳ ಕಂಟ್ರೋಲ್ ಗೆ ಇಡಿ ಬಳಕೆ ಅನ್ನೋ ಮಾತಿದೆ.




Leave a Reply

Your email address will not be published. Required fields are marked *

error: Content is protected !!