ಪ್ರಜಾಸತ್ತೆಯ ಬೇರುಗಳನ್ನು ಸಶಕ್ತಗೊಳಿಸುವ ಪತ್ರಿಕೆಗಳು

1090

ಲೇಖಕರಾದ ಡಾ.ಎ.ಎಸ್ ಬಾಲಸುಬ್ರಹ್ಮಣ್ಯ ಅವರು ಬೆಂಗಳೂರು ವಿವಿ ವಿದ್ಯುನ್ಮಾನ ವಿಭಾಗದಲ್ಲಿ ಐಸಿಎಸ್ಎಸ್ಆರ್ ಸೀನಿಯರ್ ಫೆಲೋ ಆಗಿದ್ದಾರೆ.

ಜುಲೈ 1 ರಂದು ಕರ್ನಾಟಕದಲ್ಲಿ ‘ಪತ್ರಿಕಾ ದಿನಾಚರಣೆ’ ಆಚರಿಸಲಾಗುತ್ತದೆ. ಇದರ ಪ್ರಮುಖ ಉದ್ದೇಶ ಪತ್ರಿಕೆಗಳ ಮಹತ್ವವನ್ನು ಜನತೆಗೆ ತಿಳಿಸುವುದು ಹಾಗೂ ಸಮಾಜದ ಮುನ್ನಡೆಯಲ್ಲಿ ಪತ್ರಕರ್ತರ ಪಾತ್ರವನ್ನು ಗುರುತಿಸುವುದು. ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕ ಹರ್ಮನ್ ಮೊಗ್ಲಿಂಗ್ 1843ರ ಜುಲೈ 1 ರಂದು ‘ಮಂಗಳೂರ ಸಮಾಚಾರ’ ವೆಂಬ ಒಂದು ದುಡ್ಡಿನ ಪಾಕ್ಷಿಕ ಪತ್ರಿಕೆಯನ್ನು ಕಲ್ಲಚ್ಚಿನಲ್ಲಿ ಮುದ್ರಿಸಿ ಕನ್ನಡಗರಿಗೆ ಪತ್ರಿಕೆಯ ರುಚಿ ತೋರಿಸಿದ. ಮನೆಯ ಕಟಕಿ ಹೊರಜಗತ್ತನ್ನು ತೋರಿಸುವಂತೆ ಈ ಪತ್ರಿಕೆ ಗಾಳಿಸುದ್ದಿಯ ಗುಂಗಿನಿಂದ ಜನರನ್ನು ಮುಕ್ತಗೊಳಿಸುವ ಪ್ರಯತ್ನ ಇದಾಗಿತ್ತು. ಕನ್ನಡ ಬಲ್ಲವರು ಹರಿದು ಹಂಚಿಹೋಗಿದ್ದ ಪ್ರದೇಶಗಳಲ್ಲಿ ಕನ್ನಡ ಹಣತೆ ಹಚ್ಚಿದ ಮೊದಲ ಪ್ರಯತ್ನವಿದು.

ಓದುಗರ ಉತ್ಸಾಹವನ್ನು ಗುರುತಿಸಿದ ಜರ್ಮನಿಯ ಪಾದ್ರಿ ಮೊಗ್ಲಿಂಗ್, ಇದು ಮಂಗಳೂರಿಗಷ್ಟೇ ಸೀಮಿತವಾಗಿರದೆ ಕನ್ನಡ ಓದಬಲ್ಲ ನೂರಾರು ಓದುಗರಿಗೆ ದಾರಿದೀಪವಾಗಲಿ ಹಾಗೂ ಅಚ್ಚುಕಟ್ಟಾದ ಮುದ್ರಣದಲ್ಲಿ ಹೊರಬರಲಿ ಎಂದು ಪತ್ರಿಕೆಗೆ ‘ಕನ್ನಡ ಸಮಾಚಾರ” ಎಂದು ಮರುನಾಮಕರಣಿಸಿ ಬಳ್ಳಾರಿಗೆ ವರ್ಗಾಯಿಸಿದ. ಮಂಗಳೂರು ಬಳ್ಳಾರಿ ನಡುವಿನ ದೂರ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಎರಡನೇ ವರ್ಷದಲ್ಲಿ ಈ ಪತ್ರಿಕೆ ನಿಂತಿತು.

ವಿವಿಧ ಆಡಳಿತ ಪ್ರದೇಶಗಳಲ್ಲಿ ನೆಲೆಸಿದ್ದ ಕನ್ನಡಗಿರಲ್ಲಿ ಸಮಷ್ಟಿ ಮನೋಭಾವ ಬಿತ್ತಿದ ಆರಂಭಿಕ ಯತ್ನವಿದು. ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿದ ಕೀರ್ತಿ ಇವನದು. ಕನ್ನಡ ನುಡಿಯ ಏಳ್ಗೆಗೆ ಶ್ರಮಿಸಿದ ಮೊಗ್ಲಿಂಗ್ ಗೌರವ ಡಾಕ್ಟರೇಟ್ ಪಡೆದ ಪ್ರಥಮ ಸೇವಕ. ಮುದ್ರಣ ಕಲೆಯ ಮಹತ್ವವನ್ನು ಕನ್ನಡಿಗರಿಗೆ ಪರಿಚಯಿಸಿದ ಇವರ ಸೇವೆ ಸ್ಮರಣಿಯ. 176 ವರ್ಷಗಳು ಹಿನ್ನಲೆಯ ಕನ್ನಡ ಪತ್ರಿಕೋದ್ಯಮ ಪ್ರಮುಖವಾಗಿ ಪ್ರಖರಕ್ಕೆ ಬಂದದ್ದು, ಸ್ವಾತಂತ್ರ್ಯ ಚಳವಳಿಯ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಆಯುಧಗಳಾಗಿದ್ದವು. ಸ್ವಾತಂತ್ರ್ಯ ಹಾಗೂ ನಂತರದ ಏಕೀಕರಣ ಘಟ್ಟಗಳಲ್ಲಿ ಪತ್ರಿಕೆಗಳ ಪಾತ್ರ ಬಹು ನಿರ್ಣಾಯಕ. ಸ್ವತಂತ್ರ ಭಾರತ ಏಕೀಕೃತ ಕರ್ನಾಟಕ ಬಹುಪಾಲು ಪತ್ರಿಕೆಗಳ ಪ್ರಮುಖ ಧ್ಯೇಯವಾಗಿದ್ದವು. ಜೈಲುವಾಸ, ದಂಡ ನೀಡಿಕೆ ಹಾಗೂ ಸರ್ಕಾರಿ ಬೆದರಿಕೆಗಳು ಸರ್ವೆಸಾಮಾನ್ಯವಾಗಿದ್ದವು. ಸ್ವತಂತ್ರ ಭಾರತದಲ್ಲಿ ಕೃಷಿ-ಕೈಗಾರಿಕೆಗಳ ಬೆಳವಣಿಗೆ ವೇಗ ಪಡೆಯಿತು. ಸಾಕ್ಷರರ ಪ್ರಮಾಣ ಹೆಚ್ಚಳ ಕಂಡಿತು. ಮಧ್ಯಮ ವರ್ಗದವರು ಉದ್ಯೋಗ ಅರಸಿ ನಗರಗಳತ್ತ ಮುಖಮಾಡಿದರು. ರಾಜಕೀಯ ಪ್ರಜ್ಞೆ ವೇಗಪಡೆಯಿತು. ವಿಶೇಷವಾಗಿ ಮೈತ್ರಿ ಸರ್ಕಾರಗಳ ರಾಜಕೀಯ ವಿಶೇಷ ಕುತೂಹಲ ಮೂಡಿಸಿತು. ಕೊಳ್ಳುಬಾಕು ಸಂಸ್ಕೃತಿ ಜಾಹಿರಾತಿಗೆ ಉತ್ತೇಜನ ನೀಡಿತು.

ಪತ್ರಿಕಾ ಕ್ಷೇತ್ರವೂ ಸಹ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಯಿತು. ಮೊದಲ ಪತ್ರಿಕಾ ಆಯೋಗದ ಶಿಫಾರಸುಗಳು ಈ ಕ್ಷೇತ್ರಕ್ಕೆ ಬುನಾದಿ ಹಾಕಿದವು. ಪತ್ರಿಕಾ ನೋಂದಣಿ ಕಚೇರಿ, ಪತ್ರಿಕಾ ಮಂಡಳಿ ಹಾಗೂ ಕಾರ್ಯನಿರತ ಪತ್ರಕರ್ತರ ವೇತನ ಹಾಗೂ ಸೇವೆಗಳ ಕಾನೂನುಗಳು ಈ ಉದ್ಯಮಕ್ಕೆ ಚೌಕಟ್ಟು ನೀಡಿದವು. 1975-77ರ ತುರ್ತುಪರಿಸ್ಥಿತಿ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿತು. ನಿಯತಕಾಲಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದವು. ಕಂಪ್ಯೂಟರ್ ಬಳಕೆ ಹಾಗೂ ವರ್ಣ ಮುದ್ರಣ ಓದುಗರಿಗೆ ಪೂರಕ ಆಕರ್ಷಣೆಗಳಾದವು. ಸ್ವಾತಂತ್ರ ನಂತರದ 50 ವರ್ಷಗಳಲ್ಲಿ ಪತ್ರಿಕೆಗಳು ತಮ್ಮ ಶಕ್ತಿ ಮೆರೆದವು. ಅಧಿಕಾರ ದುರುಪಯೋಗ, ಲಂಚಗುಳಿತನ, ಬಡತನ, ಹಸಿವಿನಿಂದಾಗಿ ಸಾವುಗಳನ್ನು ಕುರಿತ ಹಲವಾರು ತನಿಖಾ ವರದಿಗಳು ರಾಜಕಾರಣಿಗಳನ್ನು ನಿದ್ದೆಗೆಡಿಸಿದ್ದವು. ನಿಯತಕಾಲಿಕೆಗಳಾದ ಸಂಡೆ, ಇಂಡಿಯಾ ಟುಡೆ, ಸಂಡೇ ಅಬ್ಸರರ್ವರ್, ಔಟಲುಕ್, ದಿ ವೀಕ್, ಮುಂತಾದ ಪತ್ರಿಕೆಗಳು ಸಮಾಜದ ಎಲ್ಲ ವರ್ಗಗಳ ಸಾಧನೆ ವೈಫಲ್ಯಗಳನ್ನು ಮಾರ್ಮಿಕವಾಗಿ ಹೆಕ್ಕಿ ತೆಗೆದವು.

ಬೃಹತ ಮಾಧ್ಯಮ ಸಂಸ್ಥೆಗಳಾದ ದೂರದರ್ಶನ ಹಾಗೂ ಆಕಾಶವಾಣಿ ಪತ್ರಿಕೆಗಳ ಮೇಲೆ ಗಂಭೀರ ಪ್ರಭಾವ ಬಿರಲೇ ಇಲ್ಲ. ಆದರೆ 1990ರ ಕೊಲ್ಲಿಯುದ್ಧ ಹೊಸ ತಂತ್ರಜ್ಞಾನವಾದ ಉಪಹಗ್ರಹ ಸಂವಹನ ಆಧಾರಿತ ಟಿವಿ ಪ್ರಸಾರವನ್ನು ಉಪಖಂಡಕ್ಕೆ ಪರಿಚಯಿಸಿತು. ಜಾಗತೀಕಣದ ಭರಾಟೆ ಖಾಸಗಿಯವರಿಗೆ ಟಿವಿ ಕ್ಷೇತ್ರವನ್ನು ಮುಕ್ತಿಗೊಳಿಸಿತು. ಬಾನುಲಿ ತರಂಗಗಳು ಜನರಿಗೆ ಸೇರಿದವು ಎಂಬ ಸುಪ್ರಿಂ ಕೋರ್ಟಿನ ತೀರ್ಪು ಚರಿತ್ರಾರ್ಹ. ಖಾಸಗಿ ವಲಯದ ಸುದ್ದಿ ವಾಹಿನಿಗಳಿಗೆ 24 ಗಂಟೆ ಸುದ್ದಿಯನ್ನು ಉಣಬಡಿಸಬೇಕಿತ್ತು. ಸುದ್ದಿಯ ಲಕ್ಷ್ಮಣರೇಖೆ ಅಳಿಸಿತು. ಕನಿಷ್ಠ 16 ಗಂಟೆಗಳ ಪ್ರಸಾರಕ್ಕೆ ಸುದ್ದಿ ಹುಡುಕುವ ತವಕದಲ್ಲಿ ಕ್ಷುಲ್ಲಕ ಘಟನೆಗಳೆಲ್ಲಾ ವೈಭವೀಕರಣಗೊಂಡವು. ಸುದ್ದಿಯ ಗಂಭೀರತೆಯನ್ನೇ ಟಿವಿ ಸುದ್ದಿವಾಹಿನಿಗಳು ಹೊಸಕಿ ಹಾಕಿದವು. ಬೆಳಗಿನ ಪತ್ರಿಕೆಗಳಲ್ಲಿ ಓದುವ ಬಹುತೇಕ ಸುದ್ದಿಗಳು ಓದುಗರನ್ನು ರೋಮಾಂಚನಗೊಳಿಸಲಾಗಲಿಲ್ಲ. ಸುದ್ದಿಯ ಹಿನ್ನೆಲೆ, ಸಾಂಸ್ಕೃತಿಕ, ಸಾಮಾಜಿಕ, ಕೃಷಿ, ಕೈಗಾರಿಕೆ ಹಾಗೂ ಭರವಸೆಯ ಬೆಳಕನ್ನು ನೀಡುವ ರಚನಾತ್ಮಕ ಕ್ಷೇತ್ರಗಳತ್ತ ಪತ್ರಿಕೆಗಳು ಹೆಚ್ಚಿನ ಗಮನ ನೀಡಬೇಕಾಯಿತು.

ಸಂವಹನ ತಂತ್ರಜ್ಞಾನ ಎರಡನೇ ಹಂತ ವೆಬ್ ಆಧಾರಿತ ಮಿಂಚಂಚೆ, ಫೇಸಬುಕ್, ಗೂಗಲ್, ಟ್ವಿಟ್ಟರ್, ಹಾಗೂ ವಾಟ್ಸಪ್ಗಳು ವಿಶ್ವದ ಬೃಹತ ಸಂವಹನ ಜಾಲಗಳಾಗಿ ರೂಪಗೊಂಡವು. ಟಿವಿ ಸುದ್ದಿವಾಹಿನಿಗಳ ನಂತರ ಸುದ್ದಿ ಪೋರ್ಟಲ್ಗಳು ಮತ್ತಷ್ಟು ವೇಗವಾಗಿ ಸುದ್ದಿ ನೀಡತೊಡಗಿದವು. ಈ ಎಲ್ಲ ಜಾಲತಾಣಗಳಲ್ಲಿ ದೇಶಿಯ ಭಾಷೆಗಳ ಬಳಕೆ ಇವುಗಳಿಗೆ ಇಂಬು ನೀಡಿದವು. ಚಿತ್ರ, ಲೇಖನ, ಧ್ವನಿ ಕ್ಷಣಮಾತ್ರದಲ್ಲಿ ವಿಶ್ವದಾದ್ಯಂತ ಹರಿದಾಡಲಾರಂಭಿಸಿದವು. ಈ ವಿದ್ಯುನ್ಮಾನ ಸಂವಹನ ಜಾಲದಲ್ಲಿ ಪತ್ರಿಕೆಗಳು ಅನಿವಾರ್ಯವಾಗಿ ಭಾಗಿಯಾಗಬೇಕಾಯಿತು. ಮುದ್ರಿತ ಪತ್ರಿಕೆಗಳ ಪುಟ ಎಲ್ಲಡೆ ಪರದೆಯ ಮೇಲೆ ಲಭ್ಯವಾದವು. ಹಿಂದೆ ಬೀಳುವುದು ಬೇಡವೆಂದು ಅನಿವಾರ್ಯವಾಗಿ ವೆಬ್ಸೈಟುಗಳನ್ನು ಆರಂಭಿಸಿ ಪತ್ರಿಕೆಯ ಎಲ್ಲ ಓದು ಸರಕನ್ನು ಪರದೆಯ ಮೇಲೆ ವೀಕ್ಷಿಸಲು ಅನುವು ಮಾಡಿದವು. ಯಾವುದೇ ಉಪಕರಣದ (ಕಂಪ್ಯೂಟರ್, ಟ್ಯಾಬ್ಲೆಟ್ ಮೊಬೈಲ್ ಫೋನ್) ಪರದೆಯ ಮೇಲೆ ಓದುಬಹುದಾದ ವಿದ್ಯುನ್ಮಾನ ಪತ್ರಿಕೆಗಳು ಹೊರಬಂದವು.

ಅಂತರ್ಜಾಲದ ವಿಸ್ತರಣೆ ಹಾಗೂ ಅದರ ವೇಗ ನಾಗಾಲೋಟದ  ಪಡೆಯುತ್ತಿದ್ದಂತೆ, ಯೊರೋಪ ಹಾಗೂ ಅಮೆರಿಕೆಯ ಬಹುಪಾಲು ಯುವಜನತೆ ನವಮಾಧ್ಯಮಗಳತ್ತ ಆಕರ್ಷಿತರಾದರು. ಮುದ್ರಿತ ಪತ್ರಿಕೆಗಳ ಸಂಖ್ಯೆ, ಪ್ರಸಾರ ಹಾಗೂ ಜಾಹೀರಾತಿನ ಆದಾಯ ಇಳಿಮುಖವಾದವು. ಆದರೆ ಕನ್ನಡ ಪತ್ರಿಕೆಗಳೂ ಸೇರಿ ಭಾರತೀಯ ಪತ್ರಿಕೊದ್ಯಮದ ಮೇಲೆ ಈ ನವಮಾಧ್ಯಮ ತಂತ್ರಜ್ಞಾನಗಳು ಮಹತ್ತರ ಪರಿಣಾಮ ಬೀರಿಲ್ಲ. ಮನೆಬಾಗಿಲಗೆ ಬರುವ ಮುದ್ರಿತ ಪತ್ರಿಕೆಗಳನ್ನು ಓದುವ ಪರಿಪಾಠ ಅಭಾದಿತವಾಗಿದೆ. 2019ರ ರಾಷ್ಟ್ರೀಯ ವಾಚನೀಯ ಸಮೀಕ್ಷೆಯ ಅನುಸಾರ 1.8 ಕೋಟಿ ದೈನಿಕಗಳು ಹಾಗೂ 90 ಲಕ್ಷ ನಿಯತಕಾಲಿಕೆಗಳ ಹೊಸ ಓದುವ ವರ್ಗ ಸೇರ್ಪಡೆಯಾಗಿದೆ. ಪತ್ರಿಕೆಗಳ ಒಟ್ಟು ಓದುಗರ ಸಂಖ್ಯೆ 43 ಕೋಟಿಗೇರಿದೆ ಎನ್ನುವದು ಸಂಸತಸಕರ. ವಿಶ್ವದಲ್ಲೇ ಅತ್ಯಂತ ಬೃಹತ ಮುಖಾಮುಖಿ ಸಮೀಕ್ಷೆಯಲ್ಲಿ 3.2 ಲಕ್ಷ ಮನೆಗಳಿಗೆ ಬೇಟಿ ನೀಡಿ ಮಾಧ್ಯಮ ಹವ್ಯಾಸಗಳನ್ನು ವಾಚನೀಯ ಸಮೀಕ್ಷೆಯಲ್ಲಿ  ಕಲೆಹಾಕಲಾಗಿದೆ.

ಭಾರತ ಸೇರಿದಂತೆ ಏಷಿಯಾದ ದೇಶಗಳಲ್ಲಿ ಪತ್ರಿಕೆಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿವೆ. ಪತ್ರಿಕೆಗಳ ಸಂಖ್ಯೆ ಹಾಗೂ ಪ್ರಸಾರಗಳೆರಡೂ ಏರುಮುಖವಾಗಿವೆ. 2018ರ ಪತ್ರಿಕಾ ನೋಂದಣಿ ಮುಖ್ಯಸ್ಥರ ಪ್ರಕಾರ ದೇಶದಲ್ಲಿ 1,18,239 ನೊಂದಾಯಿತ ಪತ್ರಿಕೆಗಳಿವೆ. ಇವುಗಳಲ್ಲಿ ದಿನಪತ್ರಿಕೆಗಳು 17,573 ಉಳಿದವು ನಿಯತಕಾಲಿಕೆಗಳು. ವಿಷಾದದ ಸಂಗತಿ ಎಂದರೆ ಈ ಒಟ್ಟು ಪತ್ರಿಕೆಗಳ ಶೇ 30 ರಷ್ಟು ಮಾತ್ರ ತಮ್ಮ ಪ್ರಸಾರ ವಿವರಗಳನ್ನು ನಿಗದಿತವಾಗಿ ತಿಳಿಸವುದೆ ಇಲ್ಲ. ಈ ವರದಿಯ ಪ್ರಕಾರ ಕನ್ನಡ ಪತ್ರಿಕೆಗಳ ಪ್ರಸಾರ 84 ಲಕ್ಷ. ಇದರಲ್ಲಿ ದೈನಿಕಗಳ ಪ್ರಸಾರ 66 ಲಕ್ಷ. ಆದರೆ ಪ್ರಸಾರ ತಪಾಸಣೆ ಸಂಸ್ಥೆಯ (ಎಬಿಸಿ) ಸದಸ್ಯತ್ವ ಹೊಂದಿರುವ ಪತ್ರಿಕೆಗಳ ಪ್ರಸಾರ ಕೇವಲ 27.36ಲಕ್ಷ. ಇದರಲ್ಲಿ ದೈನಿಕಗಳ ಪ್ರಸಾರ 24.85ಲಕ್ಷ. ಈ ಸಂಸ್ಥೆಯ ವರದಿ ಪ್ರಕಾರ ಪತ್ರಿಕಾ ಪ್ರಸಾರದ ಸಂಖ್ಯೆ 4.87ರ ಗತಿಯಲ್ಲಿ ಏರಿಕೆ ಕಾಣುತ್ತಿರುವದರಿಂದ ಪತ್ರಿಕಾ ಕ್ಷೇತ್ರಕ್ಕೆ ಯಾವುದೇ ದಕ್ಕೆಯಿಲ್ಲ ಎಂದಿದೆ.

ಶೈಕ್ಷಣಿಕೆ ಪ್ರಗತಿ, ಆರ್ಥಿಕ ಬೆಳವಣಿಗೆ, ಓದುವ ಹವ್ಯಾಸ ಹಾಗೂ ಸುಲಭವಾಗಿ ಲಭ್ಯತೆ, ಸ್ಪರ್ಧಾತ್ಮಕ ದರ, ವಿಶೇಷ ಪುರವಣಿಗಳು ಹಾಗೂ ಮುದ್ರಿತ ಪತ್ರಿಕೆಗಳ ಮಹತ್ವಗಳು ಭಾರತೀಯ ಪತ್ರಿಕಾರಂಗದ ವೃದ್ಧಿಗೆ ಪೂರಕವಾಗಿವೆ. ಪಾಶ್ಚಿಮಾತ್ಯ ದೇಶಗಳಂತೆ ಪುಕ್ಕಟೆ ಪ್ರಸಾರದ ಪತ್ರಿಕೆಗಳು ನಮ್ಮಲಿಲ್ಲ. ಹಣ ತೆತ್ತು ಪತ್ರಿಕೆ ಕೊಳ್ಳುವ ಪತ್ರಿಕೆಗಳ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚು. ಉತ್ತರ ಭಾರತದಲ್ಲಿ ಪತ್ರಿಕೆಗಳ ಬೆಳವಣಿಗೆ  ಬಹುವೇಗವಾಗಿದೆ. ಹಿಂದಿ ಭಾಷೆಯ ಎರಡು ದೈನಿಕಗಳು ಈಗಾಗಲೇ 40 ಲಕ್ಷ ದಾಟಿವೆ. ಎಬಿಸಿ ಅಂಕಿ ಅಂಶಗಳ ಪ್ರಕಾರ 2006-10ರ ನಡುವಿನ ಅತ್ಯಧಿಕ ಬೆಳವಣಿಗೆ ದರದಲ್ಲಿ ಕನ್ನಡ ಪತ್ರಿಕೆಗಳು ನಾಲ್ಕನೇ ಸ್ಥಾನ ದಕ್ಕಿಸಿಕೊಂಡು, ತಮಿಳು, ಮಲಯಾಳಂ ಹಾಗೂ ಆಂಗ್ಲ ಭಾಷಾ ಪತ್ರಿಕೆಗಳನ್ನು ಹಿಂದೆ ಹಾಕಿದವು. ಅತಿ ಹೆಚ್ಚಿನ ಬೆಳವಣಿಗೆ ಹಿಂದಿ ಹಾಗೂ ತೆಲಗು ಭಾಷೆಗಳಲ್ಲಿ ದಾಖಲಾಯಿತು. ಕನ್ನಡದ 5,190 ನೊಂದಾಯಿತ ಪ್ರಕಟಣೆಗಳ ಪೈಕಿ ಕೇವಲ 891 ಮಾತ್ರ ತಮ್ಮ ಪ್ರಸಾರ ಸಂಖ್ಯೆ ವಿವರ ನೀಡಿವೆ. ಇವುಗಳಲ್ಲಿ 420 ದೈನಿಕಗಳು ಉಳಿದವು. ನಿಯತಕಾಲಿಕೆಗಳು. ಆರ್.ಎನ್.ಐ ಕಚೇರಿಗೆ ವಿವರವನ್ನು ತಪ್ಪದೆ ನೀಡುವ ಪ್ರಕಟಣೆಗಳ ಸಂಖ್ಯೆ ಹೆಚ್ಚಬೇಕು.

ಬೃಹತ ಸಮೂಹ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಅಮೇಜಾನ್, ಫೇಸಬುಕ್, ಮೈಕ್ರೊಸಾಫ್ಟ್, ಆಪಲ್ ಕಂಪನಿಗಳು ಪತ್ರಿಕೆಗಳಿಗೆ ಬೃತಹ ಸವಾಲು ಹಾಕಿವೆ. ಪತ್ರಿಕೆಗಳ ಪ್ರಮುಖ ಆದಾಯದ ಮೂಲವಾದ ವರ್ಗೀಕೃತ ಜಾಹಿರಾತು ಈ ಸಂಸ್ಥೆಗಳ ಪಾಲಾಗುತ್ತಿವೆ. ಇವುಗಳ ವಿಸ್ತಾರತೆ ಆಗಾಧ. ವಿಶ್ವದ 700 ಕೋಟಿ ಜನರಲ್ಲಿ ಸುಮಾರು 238 ಕೋಟಿ ಫೇಸ್ಬುಕ್ ಬಳಸುತ್ತಾರೆ. ಹಾಗೆಯೇ ಯುಟ್ಯೂಬ ಬಳಸುವವರು. 190 ಕೋಟಿ ಪತ್ರಿಕೆಗಳಿಗೆ ಬರುತ್ತಿದ್ದ ಜಾಹಿರಾತುಗಳು ಈ ಸಂಸ್ಥೆಗಳತ್ತ ಹರಿದಿದೆ. 40 ಕೋಟಿ ಅಂತರಜಾಲ ಬಳಕೆದಾರರನ್ನು ಹೊಂದಿರುವ ಭಾರತ 30 ಕೋಟಿ ಫೇಸಬುಕ್ ಹಾಗೂ 27 ಕೋಟಿ ಯುಟ್ಯೂಬ್ ಬಳಕೆದಾರರನ್ನು ಹೊಂದಿದೆ. ಮೊಬೈಲ್ಗಳ ಸಂಖ್ಯೆ 100 ಕೋಟಿ ಗಡಿದಾಟಿದೆ.

ಈ ಅಭೂತಪೂರ್ವ ಸಂವಹನ ಕ್ರಾಂತಿ ಪತ್ರಿಕಾರಂಗವನ್ನು ತಲ್ಲಣಗೊಳಿಸಿದೆ. ಓದುಗರಿಂದ ಬರುವ ಚಂದಾ ಹಣ ತೀರ ಕಡಿಮೆ. ಜಾಹಿರಾತು ಪ್ರಮುಖ ಆದಾಯದ ಮೂಲ. ನಮ್ಮ ದೇಶದಲ್ಲಿ ಪತ್ರಿಕಾರಂಗಕ್ಕೆ 21,700 ಕೋಟಿ ಜಾಹಿರಾತಿನ ಮೂಲಕ ಹಾಗೂ 8,800 ಕೋಟಿ ಚಂದಾ ಹಣದ ಮೂಲಕ ಸಂದಾಯವಾಗುತ್ತಿದೆ. ಅಂದರೆ ಪತ್ರಿಕೆಗಳನ್ನು ಪ್ರಧಾನವಾಗಿ ಪೋಷಿಸುವವರು ಜಾಹಿರಾತುದಾರರು, ಓದುಗರಲ್ಲ. ಇಲ್ಲಿಯೇ ಅಡಗಿರುವುದು ಪತ್ರಿಕಾರಂಗದ ಬಹುದೂಡ್ಡ ಸವಾಲಿನ ಮೂಲ. ಜಾಹಿರಾತಿನ ಹಣ ಈಗ ಇತರೆ ಮಾಧ್ಯಮಗಳತ್ತ ಹರಿಯುತ್ತಿದೆ. ಪತ್ರಿಕೆಗಳು ಕಡಿಮೆ ಬೆಲೆಯ ಸಂಸ್ಕೃತಿಗೆ ಒಗ್ಗಿಹೋಗಿವೆ. ಸುದ್ದಿಪ್ರಸಾರ ಮಾಧ್ಯಮಗಳು ಅಧಿಕವಾಗುತ್ತಿವೆ. ಮೊಬೈಲ್ ಫೋನು ಅತ್ಯಂತ ಪ್ರಮುಖ ಸಂವಹನ ಸಾಧನವಾಗಿ ಹೊರಹೊಮ್ಮಿದೆ. ಎಲ್ಲ ಸಂವಹನ ಮಾಧ್ಯಮಗಳು ಈ ಅಂಗೈಹಿಡಿತದ ಸಾಧನದಲ್ಲಿ ಸಮ್ಮಿಲಿತವಾಗಿವೆ. ಹೀಗಾಗಿ 24 ಗಂಟೆಗೊಮ್ಮೆ ಮುದ್ರಿಸಿ ಬೆಳಗಿನ ಜಾವ ಪೂರೈಸಲ್ಪಡುವ ಪತ್ರಿಕೆ ಎಷ್ಟು ಆಕರ್ಷಕವಾಗಿರಲು ಸಾಧ್ಯ ಎಂಬುದನ್ನು ಮುಂಬರುವ ಜನಾಂಗವೇ ನಿರ್ಧರಿಸಲಿದೆ. ತಂತ್ರಜ್ಞಾನ ಬೆಳವಣಿಗೆ ಯಾವ ಸ್ವರೂಪಗಳನ್ನೇ ಪಡೆಯಲಿ, ಓದುಗರು ಪತ್ರಿಕೆಗಳನ್ನು ಪೋಷಿಸಬೇಕಾಗಿದೆ. ಮುದ್ರಿತ ಪತ್ರಿಕೆಗಳನ್ನು ಆಧರಿಸಿ ನಡೆಸುವ ಮುಕ್ತ ಚಿಂತನ ಮಂಥನ ಸದಾ ನಂಬಲರ್ಹ

ಲೇಖಕರಾದ ಡಾ.ಎ.ಎಸ್ ಬಾಲಸುಬ್ರಹ್ಮಣ್ಯ

TAG


Leave a Reply

Your email address will not be published. Required fields are marked *

error: Content is protected !!