ಐಐಟಿ ಪ್ರಾಧ್ಯಾಪಕನ 11 ವರ್ಷ ಎನರ್ಜಿ ಸ್ವರಾಜ್ ಯಾತ್ರೆ

360

ಬದಲಾಗುತ್ತಿರುವ ಜಾಗತಿಕ ತಾಪಮಾನ ಹಾಗೂ ಸೌರಶಕ್ತಿಯ ಬಳಕೆಗೆ ಸಂಬಂಧಿಸಿದಂತೆ ಐಐಟಿ ಬಾಂಬೆಯ ಪ್ರಾಧ್ಯಾಪಕ ಡಾ. ಚೇತನ್ ಸಿಂಗ್ ಸೋಲಂಕಿ ರವರು  ಸುದೀರ್ಘ
11 ವರ್ಷಗಳ ಎನರ್ಜಿ ಸ್ವರಾಜ್‌  ಯಾತ್ರೆ ಅನ್ನೋ ಅಭಿಯಾನ ನಡೆಸಿದ್ದಾರೆ. ಈ ಎನರ್ಜಿ ಸ್ವರಾಜ್‌ ಯಾತ್ರೆಯ ಕುರಿತ ಸಂವಾದ ಕಾರ್ಯಕ್ರಮವನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ “ಪ್ರಾಜೆಕ್ಟ್ ಆಧಾರಿತ ಕಲಿಕೆ ಕ್ಲಬ್” (Project Based Learning Club, Department of Students Affairs, DSA) ನವತಿಯಿಂದ ಆಯೋಜಿಸಲಾಗಿತ್ತು. ಪ್ರಾಧ್ಯಾಪಕರಾದ ಡಾ. ಜಗದೀಶ್‌ ಎಚ್‌ ಗೋಡಿಹಾಳರವರು, ಈ ಸಂವಾದ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ವಿವರವನ್ನುವಿವಿಯ ಸಹಾಯಕ ಪ್ರಾಧ್ಯಾಪಕಿ ಶಮಾ ಲೋಕನಾಥ್‌ ಅನುವಾದಿಸಿದ ರೂಪ ಇಲ್ಲಿದೆ.

ಹವಾಮಾನ ಬದಲಾವಣೆ, ಎನರ್ಜಿ ಸ್ವರಾಜ್ ಮತ್ತು ನಾನು

ಶಕ್ತಿಯೇ ಸರ್ವವೂ ಮತ್ತು ಸರ್ವವೂ ಶಕ್ತಿಯೇ.  “ಭೂಮಿಯು ಪ್ರತಿಯೊಬ್ಬರ ಅಗತ್ಯತೆಯನ್ನು ಪೂರೈಸುತ್ತದೆ ಆದರೆ ಯಾವುದೇ ವ್ಯಕ್ತಿಯ ದುರಾಸೆಯನ್ನಲ್ಲ” ಎಂಬ ಮಹಾತ್ಮ ಗಾಂಧೀಜಿಯವರ ಈ ಹೇಳಿಕೆಯು ‘ಸೂರ್ಯ ಪೂರ್ವ ದಿಕ್ಕಿನಲ್ಲಿ  ಉದಯಿಸುವನುʼ ಎಂಬ ಮಾತಿನಷ್ಟೇ ಸತ್ಯ ಅಥವ ಮೂಲಭೂತವಾದದ್ದು. ಆದಾಗ್ಯೂ, ಇದಕ್ಕೆ ವ್ಯತಿರಿಕ್ತವಾಗಿ ವಿಶ್ವದ ಆರ್ಥಿಕತೆ ಹೆಚ್ಚು ಉತ್ಪಾದನೆ ಮತ್ತು ಹೆಚ್ಚು ಸೇವನೆ ಎಡೆಗೆ ಸಾಗುವ ಪ್ರಯತ್ನದಲ್ಲಿದೆ. ಈ ವಿರೋಧಾಭಾಸಕ್ಕೆ ಉತ್ತೇಜಿತವಾದ ಪ್ರಮುಖ ಅಂಶವೇ ಪಳೆಯುಳಿಕೆಯ ಶಕ್ತಿ (80-85%), ಇದು ಮತ್ತೊಂದು ವಿರೋಧಾಭಾಸಕ್ಕೆ ಕಾರಣವಾಗುತ್ತದೆ, ಇಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ನಿರ್ವಹಿಸಲು ಶಕ್ತಿಯ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂಬ ವಿಚಾರ ಒಂದೆಡೆಯಾದರೆ ಮತ್ತೊಂದೆಡೆ ಪಳೆಯುಳಿಕೆಯ ಶಕ್ತಿಯ ಅತಿಯಾದ ಬಳಕೆಯು ಹವಾಮಾನ ಬದಲಾವಣೆಯನ್ನು ಉಂಟುಮಾಡುತ್ತದೆ.

ಹವಾಮಾನ ಬದಲಾವಣೆಯು ಸುಸ್ಥಿರ ಜೀವನಕ್ಕೆ ಮಾತ್ರವಲ್ಲ, ಭೂಮಿಯ ಮೇಲಿನ ಜೀವದ ಸುಸ್ಥಿರತೆಗೆ ಬೆದರಿಕೆ ಹಾಕುತ್ತಿದೆ.  ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ಗೆ ತಲುಪಲು ನಮಗೆ ಕೇವಲ 7ರಿಂದ 9 ವರ್ಷಗಳು ಉಳಿದಿವೆ (IPCC ವರದಿ) ಎಂಬ ಆತಂಕಕಾರಿ ಅಂಕಿ ಅಂಶ ನಮ್ಮ ಮುಂದಿದೆ. ಆದ್ದರಿಂದ ಹವಾಮಾನ ಬದಲಾವಣೆಯನ್ನು ತಗ್ಗಿಸಲು “ಕಠಿಣ” ಮತ್ತು ‘ತಕ್ಷಣ’ದ ಕ್ರಮಗಳ ಅಗತ್ಯವಿದೆ.

ಈ ಸಮಸ್ಯೆಗೆ ಪರಿಹಾರವು ಎನರ್ಜಿ ಸ್ವರಾಜ್ ಅನ್ನು ಅಳವಡಿಸಿಕೊಳ್ಳುವುದರಲ್ಲಿದೆ, ಹಾಗೆಯೇ ಸ್ಥಳೀಯವಾಗಿ ಶಕ್ತಿಯನ್ನು ಉತ್ಪಾದಿಸುವುದರಲ್ಲಿ ಮತ್ತು ಆ ಶಕ್ತಿಯನ್ನು ಉಪಯೋಗಿಸುವುದರಲ್ಲಿದೆ. ಎನರ್ಜಿ ಸ್ವರಾಜ್ ಅನ್ನು ಅಳವಡಿಸಿಕೊಳ್ಳುವುದರಿಂದ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸೃಷ್ಟಿ, ಇಂಧನ ಸ್ವಾತಂತ್ರ್ಯ, ಸ್ಥಳೀಯ ಆರ್ಥಿಕ ಬಲವರ್ಧನೆ ಮತ್ತು ಹವಾಮಾನ ಬದಲಾವಣೆಯ ತಗ್ಗಿಸುವಿಕೆಗೂ ಸಹಾಯಕವಾಗುತ್ತದೆ. ಇದೇ ಆಶಯದೊಂದಿಗೆ ಒಂದು ಸಾರ್ವಜನಿಕ ಆಂದೋಲನವನ್ನು ರಚಿಸವ ಮತ್ತು ಎನರ್ಜಿ ಸ್ವರಾಜ್ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ, ಐಐಟಿ ಬಾಂಬೆಯ ಪ್ರೊ. ಚೇತನ್ ಎಸ್. ಸೋಲಂಕಿ ಅವರು ಸೌರಶಕ್ತಿ ಚಾಲಿತ ಬಸ್ ಮೂಲಕ 11 ವರ್ಷಗಳ ಸುದೀರ್ಘ ಎನರ್ಜಿ ಸ್ವರಾಜ್ ಯಾತ್ರೆಯನ್ನು (2020-30) ಕೈಗೊಂಡಿದ್ದಾರೆ. ಇವರು ಬಸ್ಸಿನಲ್ಲಿಯೇ ವಾಸಿಸುತ್ತಿದ್ದು, ತಾನು ಇನ್ನು 11 ವರ್ಷ ಮನೆಗೆ ಹೋಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದಾರೆ.

ಎನರ್ಜಿ ಸ್ವರಾಜ್ ಯಾತ್ರೆ ಬಸ್ ನಲ್ಲಿ ಪ್ರೊ.ಸೋಲಂಕಿ ಜೊತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು

ಪ್ರೊ.ಸೋಲಂಕಿ ಅವರು ನಡೆಸಿಕೊಟ್ಟ ಈ ಚರ್ಚೆಯು ಶಕ್ತಿ ಮತ್ತು ಹವಾಮಾನ ಬದಲಾವಣೆಯ ತಾತ್ವಿಕ, ತಾಂತ್ರಿಕ, ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಹಲವು ಅಂಶಗಳನ್ನು ಒಳಗೊಂಡಿತ್ತು, ಅದರ ಜೊತೆಗೆ ಎನರ್ಜಿ ಸ್ವರಾಜ್ ಬಸ್‌ನ ಬಗೆಗೆ ಡೆಮೊ ನೀಡುವ ಮೂಲಕ, ಬಸ್‌ನಲ್ಲಿ ಕೆಲಸ ಮಾಡಲು, ಮಲಗಲು, ಅಡುಗೆ ಮಾಡಲು ಮತ್ತು ತರಬೇತಿಗಾಗಿ ನೀಡಿರುವ ಹಲವು ಸೌಲಭ್ಯಗಳ ಬಗ್ಗೆ ವಿವರಿಸಿದರು.

ಎನರ್ಜಿ ಸ್ವರಾಜ್ ಯಾತ್ರಾ ಬಸ್ ಬಗೆಗಿನ ಪರಿಚಯ

ಐಐಟಿ ಬಾಂಬೆಯ ಪ್ರಾಧ್ಯಾಪಕರು, ಮಧ್ಯಪ್ರದೇಶ ಸರ್ಕಾರದ ಸೌರಶಕ್ತಿಯ ಬ್ರಾಂಡ್ ಅಂಬಾಸಿಡರ್, ಮತ್ತು ಎನರ್ಜಿ ಸ್ವರಾಜ್ ಫೌಂಡೇಶನ್ ಸಂಸ್ಥಾಪಕರು ಆದ ಡಾ. ಚೇತನ್ ಸಿಂಗ್ ಸೋಲಂಕಿ ರವರು ತಾವು 2030 ರವರೆಗೆ ಮನೆಗೆ ಹೋಗುವುದಿಲ್ಲ ಮತ್ತು ಸೋಲಾರ್ ಬಸ್‌ನಲ್ಲಿಯೇ ವಾಸಿಸುವಂತೆ ಹಾಗು ಪ್ರಯಾಣಿಸುವಂತೆ ಪ್ರತಿಜ್ಞೆ ಮಾಡಿದ್ದಾರೆ. ಅದರಂತೆಯೇ ಬಸ್ಸಿನಲ್ಲಿ ವಾಸಿಸುತ್ತಿದ್ದಾರೆ. ಅದು ಅವರ ಮೊಬೈಲ್(ಜಂಗಮ) ಮನೆ. ಎನರ್ಜಿ ಸ್ವರಾಜ್ ಯಾತ್ರಾ ಬಸ್ಸಿನಲ್ಲಿ ಎಲ್ಲಾ ದೈನಂದಿನ ಚಟುವಟಿಕೆಗಳು ಸುಸೂತ್ರವಾಗಿ ನಡೆಸುವಂತಹ ಸೌಲಭ್ಯಗಳಿವೆ.  ಬಸ್‌ನಲ್ಲಿ 3.2 kW ಸೌರ ಫಲಕಗಳು ಮತ್ತು 6 kWh ಬ್ಯಾಟರಿ ಸಂಗ್ರಹಣೆಯನ್ನು ಅಳವಡಿಸಲಾಗಿದೆ.  ಇದು 3 kVa ಇನ್ವರ್ಟರ್ ಅನ್ನು ಹೊಂದಿದೆ.  ಬಸ್ ನ ಒಳಗೆ ಸೌರಶಕ್ತಿ ಚಾಲಿತ ಲೈಟ್‌ಗಳು, ಕೂಲರ್, ಅಡುಗೆ ಒಲೆ, ಟಿವಿ, ಎಸಿ, ಲ್ಯಾಪ್‌ಟಾಪ್ ಚಾರ್ಜಿಂಗ್ ಎಲ್ಲವನ್ನು ಕಾಣಬಹುದು. ಎನರ್ಜಿ ಸ್ವರಾಜ್ ಯಾತ್ರೆ ಬಸ್ ಡೀಸೆಲ್‌ ಬಳಕೆಯ ಇಂಜಿನ್ ಹೊಂದಿದೆ.

ಈ ಶಕ್ತಿ ಸ್ವರಾಜ್‌ ಯಾತ್ರೆಯು ನಮ್ಮ ನೆಚ್ಚಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಮೂಲಕ ಹಾದು ಹೋದದ್ದು ನಮ್ಮ ಸೌಭಾಗ್ಯ. ಪ್ರೊ ಸೋಲಂಕಿ ರವರು ವಿಶ್ವವಿದ್ಯಾಲಯದ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡಿದ ಅವರು ಹವಾಮಾನ ಬದಲಾವಣೆ ಮತ್ತು ಎನರ್ಜಿ ಸ್ವರಾಜ್‌ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಪ್ರಮುಖ ಗೌರವಯುತ ಅಧಿಕಾರಿಗಳು ಹಾಗು ಪ್ರಾಧ್ಯಾಪಕರೊಡನೆ ಮಾತನಾಡಿದ ಅವರು ನಮ್ಮೆಲ್ಲರ ಹೊಣೆಗಾರಿಕೆಯನ್ನು ತಿಳಿಸಿದ್ದಲ್ಲದೆ ಮುಂದಿನ ಕಾರ್ಯಕ್ರಮಗಳ ಕಾರ್ಯ ತಂತ್ರಗಳ ಬಗ್ಗೆ ಚರ್ಚಿಸಿದರು.

ಪ್ರಾಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ಪ್ರೊ.ಸೋಲಂಕಿ

ಕಾರ್ಯಕ್ರಮದಲ್ಲಿ ಉಪ ಕುಲಪತಿ ಡಾ. ಸುಭಾಕರ್‌, ರೆಜಿಸ್ಟ್ರಾರ್‌ ಡಾ. ಬೀರಾನ್‌ ಮೊಯಿದ್ದೀನ್‌, ಸಹ ಉಪ ಕುಲಪತಿ ಡಾ. ಸುರೇಂದ್ರ ಕುಮಾರ್, ಇಂಜಿನಿಯರಿಂಗ್‌ ವಿಭಾಗದ ಡೀನ್‌ ಡಾ. ಅಬ್ದುಲ್‌ ಶರೀಫ್‌, ಡಾ. ಎಸ್.ಬಿ ಅನಾದಿನಿ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಬಾಲು, ಪ್ರಾಧ್ಯಾಪಕಿ ಡಾ. ಅನು ಸುಖದೇವ್‌, ಡಾ. ಅಶೋಕ್‌ ಇಟಗಿ, ಡಾ. ಮನೋಹರ್‌ ಜೋಶಿ, ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರಾದ ಡಾ.  ಜಗದೀಶ್‌ ಎಚ್‌ ಗೋಡಿಹಾಳ ಹಾಗೂ ಇನ್ನಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪ್ರಮುಖ ಗೌರವಯುತ ಅಧಿಕಾರಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!