ಅವರು ‘ಕೈ’ ಕೊಟ್ಟರು.. ಮತದಾರರು ದತ್ತಾ ಕೈ ಹಿಡಿತಾರಾ?

156

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಮಾಜಿ ಶಾಸಕ ವೈ.ಎಸ್ ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಮೂಲಕ ಕಡೂರಿನಲ್ಲಿ ಕೈ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಪ್ಲಾನ್ ಮಾಡಿದರು. ಆದರೆ, ಅದೆಲ್ಲವೂ ಉಲ್ಟಾ ಆಗಿದೆ. ಯಾಕಂದರೆ ಕಾಂಗ್ರೆಸ್ ಬಿಡುಗಡೆ ಮಾಡಿರುವ 2ನೇ ಪಟ್ಟಿಯಲ್ಲಿ ವೈ.ಎಸ್.ವಿ ದತ್ತಾ ಹೆಸರು ಕೈ ಬಿಡಲಾಗಿದೆ. ಬದಲಾಗಿ ಆನಂದ ಕೆ.ಎಸ್ ಅವರಿಗೆ ಟಿಕೆಟ್ ಘೋಷಿಸಿದೆ.

ಜೆಡಿಎಸ್ ಪಕ್ಷದ ನಿಷ್ಠಾವಂತ ನಾಯಕ. ದೇವೇಗೌಡರನ್ನು ಬಿಟ್ಟು ಎಲ್ಲಿ ಹೋಗುವುದಿಲ್ಲ ಎಂದು ಹೇಳಲಾಗುತ್ತಿತ್ತು. 2018ರಲ್ಲಿ ಸೋಲು ಅನುಭವಿಸಿದ್ದರು. 2023ರಲ್ಲಿ ಜೆಡಿಎಸ್ ನಲ್ಲಿ ಟಿಕೆಟ್ ಸಿಗಲ್ಲ ಎಂದು ತಿಳಿದ ಅವರು ಕಾಂಗ್ರೆಸ್ ನತ್ತ ಮುಖ ಮಾಡಿದರು. ಚುನಾವಣೆಗೆ ಘೋಷಣೆಗೂ ಮೊದಲೇ ಕೈ ಹಿಡಿದುಕೊಂಡರು. ಆದರೆ, ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರೆ ಅವರ ಕೈ ಬಿಟ್ಟರು.

ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡ ವೈ.ಎಸ್ ವಿ ದತ್ತಾ, ಅಭಿಮಾನಿಗಳ, ಕಾರ್ಯಕರ್ತರ ಸಭೆ ನಡೆಸಿದರು. ಕಡೂರ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಅವರು, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಸಭೆಯಲ್ಲಿ ಸುಮಾರು 4 ಸಾವಿರ ಜನ ಸೇರಿದ್ದರು. ಈ ಮೂಲಕ ಶಕ್ತಿ ಪ್ರದರ್ಶನ ನಡೆಸಲಾಯಿತು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದರು. ಈ ಮೂಲಕ ಕಾಂಗ್ರೆಸ್ ಗೆ ಸೆಡ್ಡು ಹೊಡೆದರು.

ಸಭೆಯಲ್ಲಿ ದತ್ತಾ ಅವರಿಗೆ ಅಭಿಮಾನಿಗಳು ಹಣದ ನೆರವು ನೀಡಿದರು. ಈ ಮೂಲಕ ನೀವು ಚುನಾವಣೆಗೆ ನಿಂತುಕೊಳ್ಳಿ. ನಾವು ನಿಮಗೆ ಸಹಾಯ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಅತ್ತ ಕಾಂಗ್ರೆಸ್ ನಾಯಕರ ಮನವೊಲಿಕೆಯ ನಡುವೆಯೂ ದತ್ತಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತೆ ಎನ್ನುವುದು ಮುಖ್ಯ. 20ನೇ ವಯಸ್ಸಿಗೆ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ನಡುವೆ ಭಿನ್ನಾಭಿಪ್ರಾಯ ಬಂದ ಮೇಲೆ ಅವರು ದೇವೇಗೌಡರ ಪರ ನಿಂತುಕೊಂಡಿರು. ಹೀಗಾಗಿ ಅವರನ್ನು ದೇವೇಗೌಡರ ಮಾನಸಪುತ್ರ ಎನ್ನಲಾಗುತ್ತಿತ್ತು.

ಎಂಎಲ್ಎ, ಎಂಎಲ್ಸಿ ಆಗಿ ಕಾರ್ಯನಿರ್ವಹಿಸಿದವರು. ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾಗಿದ್ದರು. ಪಕ್ಷದ ವಕ್ತಾರರಾಗಿಯೂ ಕೆಲಸ ಮಾಡಿದ್ದರು. ಆದರೆ, ಈ ಬಾರಿ ತೆನೆ ಇಳಿಸಿ ಕೈ ಹಿಡಿದಿದ್ದರು. ಇದೀಗ ಅದು ತಲೆ ಕೆಳಗಾಗಿದೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿದ್ದು, ಮತದಾರರು ಜಾತಿ ನೋಡದೆ ಕೈ ಹಿಡಿಯುತ್ತಾರ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!