ಕೈಗಾರಿಕಾ ಅಭಿವೃದ್ಧಿಗೆ ಭೂ ಸ್ವಾಧೀನ: ಬೃಹತ್ ಪ್ರತಿಭಟನೆ

289

ಪ್ರಜಾಸ್ತ್ರ ಸುದ್ದಿ

ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿಯ ಹಟ್ನ, ಗರುಡನಹಳ್ಳಿ, ಬೈರಸಂದ್ರ, ಬಿಳಗುಂದ ಸೇರಿದಂತೆ ಹಲವಾರು ಗ್ರಾಮಸ್ಥರು ಕೆಐಎಡಿಬಿ 1270 ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ಗೆ ಫಸಲು ಭೂಮಿ ನೀಡುವುದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ತಾಲೂಕು ಹಸಿರು ಸೇನೆ ಮತ್ತು ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಸಂಪೂರ್ಣ ಬಂದ್ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಕಳೆದ 15 ದಿನಗಳಿಂದ ನಿರಂತರವಾಗಿ ಜಮೀನು ಕಳೆದುಕೊಂಡಿರುವ ರೈತರು ಹಲವಾರು ಪ್ರತಿಭಟನೆಯನ್ನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ವರವರನ್ನು ಸಹ ಕರೆಸಿ ಅಹವಾಲು ಸಲ್ಲಿಸಿದ್ದು, ಶನಿವಾರ ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ್ ಅವರನ್ನ, ಸ್ಥಳೀಯ ಶಾಸಕ ಸುರೇಶಗೌಡ ಅವರೊಂದಿಗೆ ಭೇಟಿ ಮಾಡಿ ಮತ್ತೊಂದು ಸರ್ವೇ ಮಾಡಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

ಒಂದು ವಾರದ ಹಿಂದೆ ಹೆದ್ದಾರಿ ಬಂದ್ ಮಾಡುವುದಾಗಿ ಹೇಳಿಕೆ ಹೊರಬಿದ್ದ ಮೇಲೆ ಬೆಳ್ಳೂರು ಠಾಣಾ ಪಿಎಸ್ಐ ಆ ಭಾಗದ ಮುಖಂಡರನ್ನು ಭೇಟಿ ಮಾಡಿ ಹೆದ್ದಾರಿ ಬಂದ್ ಕೈ ಬಿಡಬೇಕೆಂದು ಮನವಿ ಮಾಡಿದರು ಮನವಿ ಒಪ್ಪಿಕೊಳ್ಳದ ರೈತರು ಮುಂಜಾನೆಯಿಂದಲೇ ಮಹಿಳೆಯರು, ಮಕ್ಕಳು, ಹಿರಿಯರು, ಸೇರಿದಂತೆ ಸಾವಿರಾರು ಜನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ರು. ಇದ್ರಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಹೀಗಾಗಿ ಪೋಲೀಸರು ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದರು, ಸುಮಾರು ಒಂದು ಗಂಟೆಯ ನಂತರ ಪ್ರತಿಭಟನಾಕಾರರು ಒಂದು ದಾರಿಯಲ್ಲಿ ವಾಹನಗಳು ಸಾಗಲು ಅನುವು ಮಾಡಿಕೊಟ್ಟರು. ಅಲ್ಲಿಯ ತನಕ ಬೆಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಪೋಲೀಸರೇ ಬೈರಸಂದ್ರ ಗ್ರಾಮದ ಮೂಲಕ ಹೋಗಲು ದಾರಿ ಮಾಡಿಕೊಟ್ಟಿದ್ರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಿಳಿದು ಕಳೆದ ಹದಿನೈದು ದಿನಗಳಿಂದ ರೈತರು ಹಲವಾರು ಬಾರಿ ಮನವಿ ಮಾಡಿದರೂ ಜಾಣಗಿವುಡರಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿಯವರು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಅವರು ಇಲ್ಲಿಗೆ ಬರುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಇದೊಂದು ರೈತರಿಗೆ ಬರೆದ ಮರಣ ಶಾಸನವಾಗಿದ್ದು, ಇದನ್ನು ತಕ್ಷಣ ಕೈ ಬಿಡಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲು ಮುಂದಾದ ತಹಶೀಲ್ದಾರ್ ಕುಂಞಿ ಅಹಮದ್ ಅವರು, ಜಿಲ್ಲಾಧಿಕಾರಿಯವರು ಕೋವಿಡ್ ಸಂಬಂಧಿಸಿದಂತೆ ಸಭೆಯಲ್ಲಿದ್ದು ಅವರ ಹೇಳಿಕೆಯ ಮೇರೆಗೆ ಒಂದು ವಾರದಲ್ಲಿ ಮುಖಂಡರು ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದರು. ಸಿಪಿಐ ರಾಜೇಂದ್ರ ಅವರು, ಪ್ರತಿಭಟನಾಕಾರರನ್ನು ಬಂದ್ ಕೈ ಬಿಡುವಂತೆ ಮನವಿಗೂ ಜಗ್ಗದ ರೈತರು ಕೇಳಲಿಲ್ಲ.

ಪ್ರತಿಭಟನೆಯಲ್ಲಿ ಸುರೇಶ, ರಮೇಶ, ರಜನಿ, ವಾಸು, ಬಸವರಾಜು ಸೇರಿದಂತೆ ಸಾವಿರಾರು ಮಹಿಳೆಯರು, ಮಕ್ಕಳು, ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!