ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ

339

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಕುಖ್ಯಾತ ರೌಡಿಶೀಟರ್ ಮೇಲೆ ಐವರು ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ಕಾರವಾರ ರಸ್ತೆಯಲ್ಲಿ ನಡೆದಿದೆ. ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಶಾಹೀದ ಇರ್ಫಾನ ಎಂಬಾತನ ಮೇಲೆ ಗುಂಡಿನ ದಾಳಿಯಾಗಿದೆ.

ಐವರು ಆಗುಂತಕರು ಕಾರವಾರ ರಸ್ತೆಯ ದುರ್ಗಾ ಬಾರ್ ಮುಂದೆ ಪೈರಿಂಗ್ ಮಾಡಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿಯನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:

ಕಾರವಾರ ರಸ್ತೆಯಲ್ಲಿ ರೌಡಿಶೀಟರ್ ಫ್ರೂಟ್ ಇರ್ಫಾನ್ ಕುಟುಂಬ ಸಮೇತ ಮದುವೆಗೆ ಬಂದಿದ್ದ. ಈ ವೇಳೆ ಸಂಬಂಧಿಕರೊಂದಿಗೆ ಮಾತನಾಡುತ್ತಿರುವಾಗ ಎರಡು ಬೈಕ್ ಗಳಲ್ಲಿ ಬಂದು ಐವರ ತಂಡ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದೆ. ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಫ್ರೂಟ್ ಇರ್ಫಾನ್ ಯಾರು?

ಧಾರವಾಡದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಈತ, ಹಣ್ಣು ಮಾರಾಟಕ್ಕೆ ತಳ್ಳುವ ಗಾಡಿಗಳನ್ನು ಬಿಡುತ್ತಿದ್ದ. ಈ ವಿಚಾರದಲ್ಲಿ ಓರ್ವನ ಜೊತೆ ಪೈಪೋಟಿ ಇತ್ತು. ಮುಂದೆ ಪೈಪೋಟಿದಾರನನ್ನು ಧಾರವಾಡದ ಜನ್ನತ ನಗರದಲ್ಲಿ ಕೊಲೆ ಮಾಡಿದ ಆರೋಪವೂ ಈತನ ಮೇಲೆ ಕೇಳಿ ಬಂದಿತು. ಈ ಪ್ರಕರಣದಿಂದ ಮತ್ತಷ್ಟು ಹೆಸರು ಮಾಡಿಕೊಂಡು ರೌಡಿಶೀಟರ್ ಪಟ್ಟ ಕಟ್ಟಿಕೊಂಡಿದ್ದ.

ಮುಂದೆ ರಿಯಲ್ ಎಸ್ಟೇಟ್, ಲ್ಯಾಂಡ್ ಡೀಲಿಂಗ್, ಬಡ್ಡಿ ವ್ಯವಹಾರ ಸೇರಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡ. ಧಾರವಾಡದಲ್ಲಿ ನಡೆಯುತ್ತಿದ್ದ ಬಹುತೇಕ ಇಸ್ಪೀಟ್ ಅಡ್ಡೆಗಳಿಗೆ ಇವನೇ ಫೈನಾನ್ಸ್ ಮಾಡ್ತಿದ್ದ ಆರೋಪವಿದೆ. ಕೊಲೆ ಸೇರಿದಂತೆ ಧಾರವಾಡದ ಶಹರ, ವಿದ್ಯಾಗಿರಿ, ಉಪನಗರ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಎರಡು ಬಾರಿ ಗಡಿಪಾರು ಆಗಿದ್ದ.




Leave a Reply

Your email address will not be published. Required fields are marked *

error: Content is protected !!