ಹಗರಣಗಳು ಮತ್ತು ಪತ್ರಕರ್ತ ಮುಖವಾಡ ತೊಟ್ಟವರು

560

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಬೆಂಗಳೂರು: ಇವತ್ತಿನ ಮಾಧ್ಯಮ ವ್ಯವಸ್ಥೆಯನ್ನು ಹಾಗೂ ಅಲ್ಲಿ ಕೆಲಸ ಮಾಡುವ ಪತ್ರಕರ್ತರನ್ನು ಜನರು ನೋಡುವ ದೃಷ್ಟಿಕೋನ ಬದಲಾಗಿ ಹಲವು ವರ್ಷಗಳೇ ಕಳೆದಿವೆ. ಅದಕ್ಕೆ ಕಾರಣ ಯಾರು ಎಂದು ಹೇಳುವ ಅಗತ್ಯವಿಲ್ಲ. ತಾಲೂಕು, ಜಿಲ್ಲಾ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಕೆಲವರು ಪತ್ರಕರ್ತರ ಹೆಸರಿನಲ್ಲಿ ಡೀಲ್ ಮಾಡುತ್ತಿದ್ದಾರೆ. ತಳಮಟ್ಟದಲ್ಲಿರುವವರು ಲೋಕಲ್ ಲೀಡರ್ ಗಳು, ಸಂಘಟನೆಗಳ ಮುಖಂಡರು, ಸರ್ಕಾರಿ ಅಧಿಕಾರಿಗಳ ಹಿಂಬಾಲಕರಂತೆ ಕೆಲಸ ಮಾಡುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಉನ್ನತ ಸ್ಥಾನದಲ್ಲಿ ಕುಳಿತವರು ಕೋಟಿ ಕೋಟಿ ಡೀಲ್ ಮಾಡುತ್ತಾ ಎಲ್ಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರನ್ನ ವಿಚಾರಣೆ ಮಾಡಲಾಗಿದೆ. ಇದರಲ್ಲಿ ಇನ್ನು ಕೆಲವು ಪತ್ರಕರ್ತರು ಇದ್ದಾರೆ ಅನ್ನೋ ಅನುಮಾನ ಮೂಡಿದೆ. ಜಾರಕಿಹೊಳಿಯನ್ನ ಸೆಕ್ಸ್ ಸಿಡಿ ಖೆಡ್ಡಾಗೆ ಬೀಳಿಸಿದರಲ್ಲಿ ಎಸ್ಐಟಿ ವಿಚಾರಣೆ ಎದುರಿಸಿದ ಪತ್ರಕರ್ತರ ಪಾತ್ರ ದೊಡ್ಡದಿದೆಯಂತೆ. ಮಾಸ್ಟರ್ ಪ್ಲಾನ್ ಮಾಡಿ, ದುಬಾರಿ ಹಾಗೂ ಅತ್ಯಾಧುನಿಕ ಸ್ಟಿಂಗ್ ಕ್ಯಾಮೆರಾಗಳನ್ನು ಬಳಸಿ ಸೆಕ್ಸ್ ಸಿಡಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ನಮ್ಮ ಮಾಧ್ಯಮ ಸಂಸ್ಥೆಗಳೇ ಹೇಳುವ ಸಿಡಿ ಗ್ಯಾಂಗ್ ನ ಕೊನೆಯ ದಾಳ ಕಲ್ಲಹಳ್ಳಿ.

ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ದೊಡ್ಡ ದೊಡ್ಡ ಕುಳಗಳನ್ನ ಬೇಟಿಯಾಡುವ ಕೆಲ ಪತ್ರಕರ್ತರು ವ್ಯವಸ್ಥಿತವಾಗಿ ತಮ್ಮದೊಂದು ಟೀಂ ರೆಡಿ ಮಾಡಿಕೊಂಡು ಈ ರೀತಿ ಕೆಲಸಗಳಿಗೆ ಕೈ ಹಾಕುತ್ತಿರುವುದು ಇದೇನು ಹೊಸದಲ್ಲ. ಈ ಹಿಂದೆ ಕೆಲ ನ್ಯೂಸ್ ಚಾನಲ್ ಗಳ ಪ್ರಮುಖರು ಜೈಲಿಗೆ ಹೋಗಿ ಬಂದಿರುವ ಉದಾಹರಣೆ ಸಹ ಇವೆ. ಹನಿ ಟ್ರ್ಯಾಪ್ ಪ್ರಕರಣಗಳಲ್ಲಿಯೂ ಸಹ ಕೆಲ ಪತ್ರಕರ್ತರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಬಂದಿದ್ದಾರೆ. ಇನ್ನು ಟಾಪ್ ಚಾನಲ್ ಗಳ ಕೆಲ ಜಿಲ್ಲಾ ವರದಿಗಾರರು ಸಹ ಸಿಕ್ಕಿಬಿದ್ದ ಕೇಸ್ ಗಳು ಕಣ್ಮುಂದೆ ಇವೆ. ಈಗ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು ಸಿಕ್ಕಿಬಿದ್ದಿದ್ದಾರೆ.

ಒಂದು ಕಾಲದಲ್ಲಿ ಪತ್ರಕರ್ತರು ಅಂದ್ರೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಪುಂಡ ಪೋಕರಿಗಳು ಹೆದರುತ್ತಿದ್ದರು. ಪತ್ರಕರ್ತರು ಅಂದರೆ ಗೌರವ ಇತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಯುವ ಪತ್ರಕರ್ತರಿಗೆ ಕಿವಿಮಾತು ಹೇಳುತ್ತಾರೆ. ಆದ್ರೆ, ಅದನ್ನು ಎಷ್ಟರ ಮಟ್ಟಿಗೆ ಕೇಳುತ್ತಿದ್ದಾರೆ? ಪತ್ರಿಕಾರಂಗದ ಮೌಲ್ಯಗಳನ್ನ ಎಷ್ಟೊಂದು ಪಾಲಿಸುತ್ತಿದ್ದಾರೆ ಎಂದು ಕೇಳಿದರೆ ಯಾರ ಬಾಯಿಯಿಂದಲೂ ಮಾತು ಬರುವುದಿಲ್ಲ. ನಾಲ್ಕು ಅಕ್ಷರ ಬರೆಯಲು ಬರದೆ ಇರುವವರು ಸಹ ಪತ್ರಕರ್ತನೆಂದು ಪೋಸ್ ಕೊಡುತ್ತಾ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಲೋಗೋ ಸಿಕ್ಕರೆ ಸಮಾಜವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ ಅದೆಷ್ಟು ಜನರು ಬದಲಾಗಿದ್ದಾರೋ..

ಇತಿಹಾಸ, ರಾಜಕೀಯ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಸೇರಿದಂತೆ ಅದೆಷ್ಟೋ ವಿಷಯಗಳ ಐತಿಹಾಸಿಕ ಹಿನ್ನೆಲೆಯ ಅ ಆ ಇ ಗೊತ್ತಿಲ್ಲದವರು ಪತ್ರಕರ್ತರು.! ಪ್ರಾಮಾಣಿಕವಾಗಿ ಇಂದಿಗೂ ಪತ್ರಿಕಾ ವೃತ್ತಿಯ ಮೌಲ್ಯಗಳನ್ನ ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವವರ ಸಂಖ್ಯೆ ಕಡಿಮೆಯಿದೆ. ಸಿಡಿ ಹಿಂದಿನ ಕೈಗಳು ಯಾವವು ಎಂದು ಇಡೀ ದಿನ ಮಾತನಾಡುತ್ತಿರುವ ಮಾಧ್ಯಮ ಸಂಸ್ಥೆಗಳ ಉನ್ನತ ಮೂಲಗಳಿಗೆ ಗೊತ್ತೇ ಇಲ್ಲ! ಗೊತ್ತಿದ್ದರೂ ಹೇಳಲ್ಲ. ಕಾರಣ, ಆ ಅಶ್ಲೀಲ ಸಿಡಿಯ ರಾಡಿ ತಮ್ಮ ಮುಖಕ್ಕೆ ಸಿಡಿಯುತ್ತೆ ಅನ್ನೋ ಭಯ.




Leave a Reply

Your email address will not be published. Required fields are marked *

error: Content is protected !!