‘ಕೈ-ಕಮಲ’ದ ನಡುವೆ ಕಾಣೆಯಾದ ‘ತೆನೆ ಮಹಿಳೆ’

228

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾವೇರಿಯ ಹಾನಗಲ್ ಹಾಗೂ ವಿಜಯಪುರದ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಆಗಿದೆ. ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಬರೋಬ್ಬರಿ 93,865 ಮತಗಳನ್ನು ಪಡೆಯುವ ಮೂಲಕ 31,185 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 62,860 ಮತಗಳು ಪಡೆಯುವುದರೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ಕೇವಲ 4,353 ಮತಗಳನ್ನು ಪಡೆಯುವುದರೊಂದಿಗೆ ಹೀನಾಯ ಸೋಲು ಅನುಭವಿಸಿದ್ದಾರೆ.

ಸಿಂದಗಿಯಲ್ಲಿ ದಿವಂಗತ ಎಂ.ಸಿ ಮನಗೂಳಿಯಿಂದಾಗಿ ಜೆಡಿಎಸ್ ಗೆಲುವಿಗೆ ಕಾರಣವಾಗಿತ್ತು ಅನ್ನೋದು ಈ ಚುನಾವಣೆಯಿಂದ ತಿಳಿದು ಬಂದಿದೆ. ಬರೀ ಜೆಡಿಎಸ್ ಪಕ್ಷಕ್ಕೆ ಸಿಂದಗಿ ಮತಕ್ಷೇತ್ರದಲ್ಲಿ ಬೆಂಬಲಿಗರು, ಕಾರ್ಯಕರ್ತರು ಇಲ್ಲ. ವ್ಯಕ್ತಿಗತವಾಗಿ ಪಕ್ಷಕ್ಕೆ ಪ್ಲಸ್ ಆಗಿತ್ತೆ ಹೊರತು ಪಕ್ಷದಿಂದಲ್ಲ.

ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿನ ನಗೆ ಬೀರುವ ಮೂಲಕ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಇದರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಸ್ವಕ್ಷೇತ್ರದಲ್ಲಿ ಭಾರೀ ಮುಖಭಂಗವಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೇವಲ 921 ಮತಗಳನ್ನು ಪಡೆದು ಸಾವಿರರ ಗಡಿ ಸಹ ದಾಟಿಲ್ಲ. ಎರಡು ಕಡೆ ಜೆಡಿಎಸ್ ಅಭ್ಯರ್ಥಿಗಳು ಅತ್ಯಂತ ಹೀನಾಯವಾಗಿ ಸೋಲು ಕಂಡಿವೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಗೆ ನೆಲೆಯಿಲ್ಲ ಅನ್ನೋದು ತಿಳಿದಿದೆ. ಇದರೊಂದಿಗೆ ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಕಳೆದು ಹೋಗಿದೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಈ ಫಲಿತಾಂಶದ ಬಗ್ಗೆ ನಮಗೆ ಮೊದಲೆ ಗೊತ್ತಿತ್ತು. ಪಕ್ಷ ಸಂಘಟನೆಯ ಕೊರತೆಯಿದೆ ಅನ್ನೋದು ತಿಳಿದಿತ್ತು. ಕಾರ್ಯಕರ್ತರ ಒತ್ತಾಸೆಯಿಂದಾಗಿ ಅಭ್ಯರ್ಥಿಗಳನ್ನು ಹಾಕಿದ್ವಿ. ಆದರೆ, ನನ್ನ ಗುರಿ ಇರುವುದು 2023ರ ಚುನಾವಣೆ ಮೇಲೆ. ಹೀಗಾಗಿ ಈ ಸೋಲನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!